ADVERTISEMENT

ಸಹೃದಯರು ಇರುವತನಕ ಕಲೆ ಜೀವಂತ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 3:30 IST
Last Updated 1 ಅಕ್ಟೋಬರ್ 2012, 3:30 IST

ದೊಡ್ಡಬಳ್ಳಾಪುರ: ಸಹೃದಯ ಕಲಾವಿದರು ಕಲೆಯನ್ನು ಆಸ್ವಾದಿಸಿ ಉತ್ತೇಜಿಸುತ್ತಾರೆಯೋ ಅಲ್ಲಿಯವರೆಗೆ ಕಲೆ ಜೀವಂತವಾಗಿರುತ್ತದೆ ಎಂದು ಉಭಯಗಾನ ವಿದುಷಿ ಡಾ.ಶ್ಯಾಮಲಾ ಜಿ.ಭಾವೆ ತಿಳಿಸಿದರು.   

ಅವರ ಇಲ್ಲಿನ ರಾಮಾಂಜನೇಯ ಕಲ್ಯಾಣ ಮಂದಿರದಲ್ಲಿ ನಡೆದ `ಕನ್ನಡ ನಾದ ಸೌರಭ~ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸೃಜನಶೀಲ ಕಲೆ ತನ್ನ ಹೊಸ ಆಯಾಮಗಳನ್ನು ಅನಾವರಣಗೊಳಿಸುವ ಹಾದಿಯಲ್ಲಿ ಸಹೃದಯರ ಸ್ಪಂದನೆ ಮುಖ್ಯವಾದದ್ದು ಎಂದರು.

ಪುರಂದರ ಮತ್ತು ಕನಕದಾಸ ಮೊದಲಾದವರು ತಮ್ಮ ದಾಸ ಸಾಹಿತ್ಯ ಭಂಡಾರವನ್ನು ಕನ್ನಡ ನಾಡಿನ ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಧಾರೆ ಎರೆದಿದ್ದಾರೆ. ದೇವರ ನಾಮ ಅಥವಾ ದಾಸರ ಪದಗಳು ಕನ್ನಡ ಸಾಹಿತ್ಯದ ಅವಿಭಾಜ್ಯ ಅಂಗವಾಗಿರುವುದು ಸರ್ವವಿದಿತ. 12 ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ಕ್ರಾಂತಿ ಮಾಡಿದ ವಚನ ಸಾಹಿತ್ಯವೂ 19ನೇ ಶತಮಾನದಲ್ಲಿ ಸಂಗೀತ ವಿಕಾಸದ ಪ್ರಕ್ರಿಯೆಯಲ್ಲಿ ವಚನ ಸಂಗೀತ ಎನ್ನುವ ವಿನೂತನ ಶೈಲಿಯ ಮೂಲಕ ಜನಮಾನಸದಲ್ಲಿ ಮನೆ ಮಾಡಿದೆ ಎಂದರು.

ಸ್ವಾತಂತ್ರ್ಯಾ ನಂತರ ಭಾಷಾವಾರು ಪ್ರಾಂತ್ಯಗಳ ವಿಂಗಡನೆಯಾಗಿ ಕರ್ನಾಟಕದಲ್ಲಿ ಕನ್ನಡ ಕವಿತೆಗಳ ಗಾಯನದ ಶೈಲಿ ಒಂದು ಚಳವಳಿಯಾಗಿ ನಡೆದು ಬಂದಿದೆ. ಕನ್ನಡ ಸುಗಮ ಸಂಗೀತ ಶೈಲಿಯ ಉಗಮವಾದ ಸುಗಮ ಸಂಗೀತ ಇಂದು ಸಂಗೀತದ ಅವಿಭಾಜ್ಯ ಭಾಗವಾಗಿದೆ. ಇದು ಕವಿ ಕಾವ್ಯವನ್ನು ರಸಿಕರಿಗೆ ತಲುಪಿಸುತ್ತಿರುವ ಸಶಕ್ತ ಮಾಧ್ಯಮವಾಗಿದೆ.
 
ಕನ್ನಡ ನಾದ ಸೌರಭ ಈ ಮೂರು ಕನ್ನಡ ಶೈಲಿಗಳ ತ್ರಿವೇಣಿ ಸಂಗಮದ ಗಾಯನ ರೂಪಕವಾಗಿದ್ದು, ವಿಶಿಷ್ಟ ಪ್ರಯೋಗಗಳ ಮೂಲಕ ಕನ್ನಡ ನಾಡಿನಲ್ಲಿ ಹಲವಾರು ಕಾರ್ಯಕ್ರಮಗಳು ಮೂಡಿ ಬಂದಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಖಜಾಂಚಿ ಬಿ.ಮುನೇಗೌಡ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಪ್ಪಕಾರನಹಳ್ಳಿ ವೆಂಕಟೇಶ್, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕಿ ಪುಷ್ಪಾ ಶಿವಶಂಕರ್ ಮೊದಲಾದವರು ಭಾಗವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸಿದ್ದ ಈ ಕಾರ್ಯಕ್ರಮವನ್ನು ಅನಿಕೇತನ ಟ್ರಸ್ಟ್, ಸಂಸ್ಕೃತಿ ಟ್ರಸ್ಟ್, ಲಯನ್ಸ್ ಕ್ಲಬ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಗಳು ಆಯೋಜಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.