ADVERTISEMENT

ಸಿಗ್ನಲ್ ದೀಪ ಅಳವಡಿಕೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 5:05 IST
Last Updated 9 ಜುಲೈ 2012, 5:05 IST

ದೇವನಹಳ್ಳಿ: ಹೊಸಬಸ್ ನಿಲ್ದಾಣ ಹಾಗೂ ಹಳೆ ಬಸ್ ನಿಲ್ದಾಣ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ದೀಪ ಅಳವಡಿಸುವಂತೆ ಆಗ್ರಹಿಸಿ ತಾಲ್ಲೂಕು ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾನುವಾರ ಸಂಚಾರಿ ಪೋಲೀಸ್ ಠಾಣೆಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರ ನೀಡಿ ಮಾತನಾಡಿದ ತಾಲ್ಲೂಕು ಕುರುಬರ ಸಂಘದ ಕಾರ್ಯದರ್ಶಿ, ಸಿ.ಮುನಿರಾಜು ಅವರು, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಮಾರ್ಗ ಪಟ್ಟಣದ ಪ್ರಮುಖ ಎರಡು ವೃತ್ತವನ್ನು ಹಾದು ಬಸ್ಸುಗಳು ಸಂಚರಿಸುತ್ತವೆ.
 
ಅಲ್ಲದೇ ಹೊಸ ಬಸ್ ನಿಲ್ದಾಣದಿಂದ ಸೂಲಿಬೆಲೆ ಹೊಸಕೋಟೆ ಕಡೆಗೂ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದು, ಸಂಚಾರ ದಿನನಿತ್ಯ ದಟ್ಟಣೆ ಇರುತ್ತದೆ. ಬೆಳಿಗ್ಗೆ ಮತ್ತು ಸಾಯಂಕಾಲ 4 ರ ವೇಳೆಗೆ ಶಾಲಾ ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಮತ್ತು ನೌಕರರಿಗೆ ವೃತ್ತವನ್ನು ದಾಟುವುದು ಕಷ್ಟವಾಗುತ್ತಿದೆ ಎಂದು ಸಮಸ್ಯೆಯನ್ನು ಬಿಚ್ಚಿಟ್ಟರು.

ನ್ಯಾಯಾಲಯ ಸೇರಿದಂತೆ, ಮಿನಿ ವಿಧಾನಸೌಧ ಹಾಗೂ ಅನೇಕ ಶಿಕ್ಷಣ ಸಂಸ್ಥೆಗಳಿಗೆ ತೆರಳಲು ಹೊಸ ಬಸ್ ನಿಲ್ದಾಣವೇ ಏಕೈಕ ಮಾರ್ಗವಾಗಿದೆ. ರಸ್ತೆಯ ಎಲ್ಲಾ ಭಾಗಗಳಲ್ಲಿ ರಸ್ತೆ ವಿಭಜಕ ನಿರ್ಮಿಸಬೇಕು. ಪ್ರಯಾಣದ ಬಸ್ಸುಗಳನ್ನು ನಿಲ್ದಾಣದ ಒಳ ಆವರಣದಲ್ಲಿ ರಸ್ತೆಯಿಂದ 50 ಅಡಿ ಅಂತರದಲ್ಲಿ ನಿಲುಗಡೆ ಮಾಡಬೇಕು. 

ನಿತ್ಯವೂ ಇಬ್ಬರು ಸಂಚಾರಿ ಪೋಲೀಸರನ್ನು ಎರಡೂ ವೃತ್ತದ ಬಳಿ ನಿಯೋಜಿಸಬೇಕು. ಈ ಮೂಲಕ ಅಪಘಾತಗಳನ್ನು ತಡೆದು ಸಂಚಾರಿ ವ್ಯವಸ್ಥೆಯನ್ನು ಸುಗಮ ಗೊಳಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಂಚಾರಿ ವೃತ್ತ ನಿರೀಕ್ಷಕ ಶ್ರಿಧರ್ ಅವರು, `ಸಂಚಾರಿ ಪೋಲೀಸ್ ಇಲಾಖೆ ಈಗಾಗಲೇ ಸಂಚಾರ ಸುಗಮಗೊಳಿಸಲು ಪಟ್ಟಣದ ಠಾಣೆಗೆ 25 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ತರಬೇತಿ ನೀಡುತ್ತಿದೆ ಎಂದರು. ಸಿಗ್ನಲ್ ದೀಪ ಅಳವಡಿಕೆ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಸಿಗ್ನಲ್ ದೀಪಗಳ ಸಮಯ ನಿಗದಿಪಡಿಸಲು ತಜ್ಞರು ಬಂದು ಪರಿಶೀಲಿಸಿದ ನಂತರ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಂಚಾರಿ ಎ.ಎಸ್.ಐ ರಾಮಪ್ಪ, ಸಮಾನ ಶಿಕ್ಷಣ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಸಂಚಾಲಕ ಅಂಬರೀಷ್, ರಂಗಸ್ವಾಮಿ, ಎಸ್.ಆರ್.ವಿಜಯ್‌ಕುಮಾರ್, ಶಶಿಕುಮಾರ್, ಶಿವರಾಂ, ನಾಗರಾಜ್, ಮುನಿಕೃಷ್ಣ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.