ADVERTISEMENT

ಸೂರ್ಯಸಿಟಿಗೆ : ಪ್ರಾಂತ ರೈತ ಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 10:09 IST
Last Updated 20 ಡಿಸೆಂಬರ್ 2013, 10:09 IST

ಆನೇಕಲ್‌: ‘ತಾಲ್ಲೂಕಿನಲ್ಲಿ ರೈತರ ಭೂಮಿಗಳನ್ನು ಸರ್ಕಾರ ವಿವಿಧ ಯೋಜನೆಗಳಡಿ ಸ್ವಾಧೀನ ಪಡಿಸಿ ಕೊಳ್ಳುತ್ತಿದೆ. ಆದರೆ ರೈತರಿಗೆ ಭೂಮಿಗೆ ಮಾರುಕಟ್ಟೆ ಬೆಲೆ ನೀಡದೆ ವಂಚಿಸ ಲಾಗುತ್ತಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಅಶೋಕ್‌ ಕುಮಾರ್ ಆರೋಪಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ತಾಲ್ಲೂಕಿನ ಬೊಮ್ಮಂಡ ಹಳ್ಳಿ ಹಾಗೂ ಕೋನಸಂದ್ರ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಅವರು ಮಾತ ನಾಡಿದರು.

ತಾಲ್ಲೂಕಿನಲ್ಲಿ ಈಗಾಗಲೇ ನಾಲ್ಕು ಸಾವಿರ ಎಕರೆಗೂ ಹೆಚ್ಚು ಭೂಮಿ ಯನ್ನು ಗೃಹ ಮಂಡಳಿ ವಶಪಡಿಸಿ ಕೊಂಡು ರೈತರನ್ನು ಒಕ್ಕಲೆಬ್ಬಿಸಿದೆ. ಕೆಐಡಿಬಿ ಸಹಾ ನೂರಾರು ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿ ಕೊಂಡು ಕೃಷಿ ಭೂಮಿ ಇಲ್ಲದಂತೆ ಮಾಡಿದೆ.

ಈ ನಡುವೆ ಕೃಷಿ ಪ್ರಧಾನ ವಾಗಿರುವ ಇಂಡ್ಲವಾಡಿ, ಬೊಮ್ಮಂಡಳ್ಳಿ, ಕೋನಸಂದ್ರ, ಕಾಡು ಜಕ್ಕನಹಳ್ಳಿ, ಬಗ್ಗನದೊಡ್ಡಿ, ಮೈಸೂರ ಮ್ಮನ ದೊಡ್ಡಿ, ತಿಮ್ಮಯ್ಯನ ದೊಡ್ಡಿ ಗ್ರಾಮಗಳಲ್ಲಿ ರೈತರ ಒಪ್ಪಿಗೆ ಇಲ್ಲದೇ ಬಲವಂತವಾಗಿ ಭೂಸ್ವಾಧಿನ ಮಾಡಿ ಕೊಳ್ಳಲು ಗೃಹ ಮಂಡಳಿ ನೋಟಿಸನ್ನು ಪತ್ರಿಕೆಗಳ ಮೂಲಕ ಪ್ರಕಟಿಸಿದೆ. ಇದರಿಂದ ಕೃಷಿ ಭೂಮಿ ಕಳೆದು ಕೊಂಡು ರೈತರು ದಿವಾಳಿಯಾಗುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.

ಸರ್ಕಾರ ಮಧ್ಯ ಪ್ರವೇಶಿಸಿ ಗೃಹ ಮಂಡಳಿಯ ತೀರ್ಮಾನಕ್ಕೆ ತಡೆ ನೀಡಬೇಕು ಎಂದು ಒತ್ತಾಯಿಸಿದರು. ಬಗರ್‌ಹುಕುಂ ಸಾಗುವಳಿ ಮಾಡುವ ರೈತರಿಗೆ ಹಕ್ಕುಪತ್ರ ನೀಡಬೇಕು.ಸೂರ್ಯ ಸಿಟಿ 4ನೇ ಹಂತದ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಮಹದೇಶ್‌, ಬೊಮ್ಮಂಡ ಹಳ್ಳಿ ರಮೇಶ್‌, ಪ್ರಾಂತರ ರೈತ ಸಂಘದ ಮುಖಂಡರಾದ ಬಾಲ ರಾಜು, ಗೋಪಾಲಪ್ಪ, ಬಿ.ಎನ್‌ .ಮಂಜುನಾಥ್‌, ಬೊಮ್ಮಂಡ ಹಳ್ಳಿ ಲಿಂಗಪ್ಪ, ಆನಂದ್‌, ಶ್ರೀನಿವಾಸ್‌, ಕೋನಸಂದ್ರ ನಂಜುಂಡಪ್ಪ, ರಾಜಾ ಪುರ ಪ್ರಕಾಶ್‌ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.