ADVERTISEMENT

ಸೇವೆ ಸ್ವಾರ್ಥ ರಹಿತವಾಗಿರಲಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 5:40 IST
Last Updated 13 ಆಗಸ್ಟ್ 2012, 5:40 IST

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಚಿಂತನೆಯ ಅರಿವು ಮೂಡಿಸುವ ಅನಿವಾರ್ಯತೆ ಇದೆ. ದೇಶ, ಭಾಷೆ, ಸಂಸ್ಕೃತಿ ವಿಚಾರಗಳು ಪಠ್ಯ ಬೋಧನೆಯಷ್ಟೇ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಪಿ.ರಾಜಣ್ಣ ಹೇಳಿದರು.

ನಗರದ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಕಾರ್ಯ ಚಟುವಟಿಕೆಗಳ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೇವೆಯ ಉದ್ದೇಶ ಯಾವಾಗಲೂ ಸ್ವಾರ್ಥರಹಿತವಾಗಿರಬೇಕು. ದೇಶದ ಸಾರ್ವಭೌಮತ್ವ ಮತ್ತು ಪ್ರತಿಷ್ಟೆಯನ್ನು ಎತ್ತಿಹಿಡಿದ ವ್ಯಕ್ತಿಗಳು ನಮ್ಮ ಆದರ್ಶವಾಗಬೇಕು. ಆದರೆ ಕೇವಲ ಆಕರ್ಷಣೆಗೆ ಮಾರು ಹೋಗುತ್ತಿರುವ ಆಧುನಿಕ ಯುವಜನತೆ ನಿಜವಾದ ಮಾನವೀಯ ಮೌಲ್ಯಗಳನ್ನು ಮರೆಯುತ್ತಿರುವುದು ವಿಷಾದನೀಯ. ಇಂದಿನ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳ ಮಧ್ಯೆ ದೊಡ್ಡ ಬಿರುಕು ಕಾಣುತ್ತಿದೆ. ಇದಕ್ಕೆ ಪ್ರಸ್ತುತ ಜೀವನ ಪದ್ಧತಿಯ ಬದಲಾವಣೆಯೇ ಕಾರಣ ಎಂದರು.

ಕಾಲೇಜಿನ ಜಂಟಿ ಎನ್‌ಎಸ್‌ಎಸ್ ಅಧಿಕಾರಿ ಕೆ.ಆರ್.ರವಿಕಿರಣ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಸೇವೆಯ ಮೂಲೋದ್ಧೇಶದಿಂದ ಗಾಂಧೀಜಿ ಮೂಲಕ ಸ್ಥಾಪನೆಯಾದ ಘಟಕವಾಗಿದೆ. ಇಂದು ರಾಷ್ಟ್ರದ ಅತಿದೊಡ್ಡ ಯುವಪಡೆ ಈ ಹೆಸರಿನಡಿಯಲ್ಲಿ ಸಂಘಟಿತವಾಗಿದೆ. ಅದರ ಔಚಿತ್ಯ ಮತ್ತು ಮಹತ್ವವನ್ನು ಅರಿತು ನಮ್ಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಶ್ರೀನಿವಾಸನ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಎಂ.ಚಿಕ್ಕಣ್ಣ, ಕಾಲೇಜಿನ ಸಹ ಪ್ರಾಧ್ಯಾಪಕರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.