ADVERTISEMENT

ಸ್ವಚ್ಛತೆಗೆ ಸಂದ ನೈರ್ಮಲ್ಯ ರತ್ನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತರೆ, ತಾಲ್ಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಮಟ್ಟದಲ್ಲಿ ‘ನೈರ್ಮಲ್ಯ ರತ್ನ’ ಪ್ರಶಸ್ತಿ ಲಭ್ಯವಾಗಿದೆ.ನಿರ್ಮಲಯೋಜನೆಯಡಿ ಸಂಪೂರ್ಣ ಸ್ವಚ್ಚತೆ ಸಾಧನೆ ಮಾಡಿ ಜಿಲ್ಲೆಯ ಎರಡನೇ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಅಣ್ಣೇಶ್ವರ ಪಾತ್ರವಾಗಿದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 11 ಗ್ರಾಮಗಳಿದ್ದು, 8716 ಜನಂಸಂಖ್ಯೆ ಹೊಂದಿದೆ.
 

ಕಳೆದ ಎರಡು ವರ್ಷಗಳಿಂದ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡಿರುವ ಪಂಚಾಯಿತಿ, ಪ್ರತಿ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಬೀದಿ ನಾಟಕ, ಭಿತ್ತಿ ಪತ್ರ, ಜಾಥಾ ಮೂಲಕ ಅರಿವು ಮೂಡಿಸಿದೆ. ಇವೆಲ್ಲದರ ಫಲವಾಗಿಯೇ ಗ್ರಾಮದಲ್ಲಿ ಬಹುತೇಕ ಮನೆಯವರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ.
 

ಪ್ರತಿ ಗ್ರಾಮದಲ್ಲಿ ಮೂರು ದಿನಗಳಿಗೊಮ್ಮೆ ಚರಂಡಿ, ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ನಿಗದಿತ ಸ್ಥಳದಲ್ಲಿ ತ್ಯಾಜ್ಯ ಹಾಕುವಂತೆ ಅರಿವು ಮೂಡಿಸಲಾಗಿದೆ. ಅಣ್ಣೇಶ್ವರ ಪಂಚಾಯಿತಿ ವ್ಯಾಪ್ತಿಯಲ್ಲಿನ ಹನ್ನೊಂದು ಅಂಗನವಾಡಿ ಕೇಂದ್ರಗಳಲ್ಲಿ ಹೈಟೆಕ್ ಶೌಚಾಲಯಗಳಿವೆ. ಹತ್ತು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ಸೋಲಾರ್ ದೀಪ ಮತ್ತು ಶೌಚಾಲಯ ನಿರ್ಮಿಸಲಾಗಿದೆ.
 

ADVERTISEMENT

ಉತ್ತಮ ನೈರ್ಮಲ್ಯದಿಂದ ಜನಸಾಮಾನ್ಯರ ಆರೋಗ್ಯ ಮಟ್ಟ ಉತ್ತಮವಾಗುವಂತೆ ಮಾಡಿದೆ. ಜೀವ ಜಲವನ್ನು ಮಿತವಾಗಿ ಬಳಸುವಂತೆ ತಿಳಿವಳಿಕೆ ನೀಡಲಾಗಿದ್ದು, ಮಳೆ ನೀರು ಸಂಗ್ರಹ ಯೋಜನೆಯ ಅನುಷ್ಠಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
‘ಚರಂಡಿಗಳು ಸ್ವಚ್ಚವಾಗಿವೆ. ಆಗಿಂದಾಗ್ಗೆ ಕಸ ವಿಲೇವಾರಿಯಾಗುತ್ತಿದೆ. ಕುಡಿಯುವ ನೀರಿನ ಸೌಲಭ್ಯ ಉತ್ತಮವಾಗಿದೆ. ಸ್ವಲ್ಪ ವಿದ್ಯುತ್ ಸಮಸ್ಯೆ ಇದೆ’ ಎನ್ನುತ್ತಾರೆ ಯರ್ರಪ್ಪನಹಳ್ಳಿಯ ಕೆಂಪಯ್ಯ.
 

‘ಈ ಹಿಂದೆ ಶೌಚಾಲಯಕ್ಕೆ ಬೇಲಿಸಾಲು, ತಿಪ್ಪೆಗುಂಡಿಯನ್ನು ಆಶ್ರಯಿಸಲಾಗುತ್ತಿತ್ತು. ಈಗ ಪ್ರತಿ ಮನೆಗಳಲ್ಲೂ ಉತ್ತಮ ಶೌಚಾಲಯಗಳಿವೆ. ತ್ಯಾಜ್ಯ ವಿಲೇವಾರಿಯೂ ಸಮರ್ಪಕವಾಗಿದೆ’ ಎನ್ನುತ್ತಾರೆ ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಚಾಪುರ ಗ್ರಾಮದ ರಾಜಣ್ಣ ಅವರ ಅಭಿಪ್ರಾಯ.
 

ಮಳೆ ನೀರು ಸಂಗ್ರಹ ಯೋಜನೆಯಿಂದ ಜೀವಜಲ ಸಂರಕ್ಷಣೆ ಕುರಿತು ಚಿಂತಿಸಲಾಗುತ್ತಿದೆ. ಸಮಗ್ರ ಕುಡಿಯುವ ನೀರಿನ ನಿರ್ವಹಣೆ ಮಾಡಲಾಗಿದೆಯಾದರೂ ವಿದ್ಯುತ್ ಆಗಾಗ್ಗೆ ಕೈಕೊಡುತ್ತಿದೆ. ಭವಿಷ್ಯದ ಯೋಜನೆಯ ಬಗ್ಗೆ ಸದಸ್ಯರ ಗಮನಕ್ಕೆ ತಂದು ಚರ್ಚಿಸಲಾಗುವುದು ಎಂದು ಪಿಡಿಒ ರಾಜಣ್ಣ ತಿಳಿಸಿದ್ದಾರೆ.
 

‘ಸರ್ಕಾರ  ಪಂಚಾಯಿತಿ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡುತ್ತಿದೆ. ಅಧಿಕಾರಿಗಳಾದ ನಾವು ಜನರಿಗೆ ಅರಿವು  ಮೂಡಿಸಿ, ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.  ನೈರ್ಮಲ್ಯ ರತ್ನ ಪ್ರಶಸ್ತಿಗೆ ಪಂಚಾಯಿತಿ ಆಯ್ಕೆಯಾಗಿರುವುದು ಸಂತಸ ತಂದಿದ್ದು, ಜವಾಬ್ದಾರಿಯೂ  ಹೆಚ್ಚಿದೆ ಎನ್ನುತ್ತಾರೆ  ರಾಜಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.