ADVERTISEMENT

‘ಮಹಿಳೆಯರ ಧ್ವನಿ ಬದಲಾಗಬೇಕಿದೆ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 11:14 IST
Last Updated 18 ಮಾರ್ಚ್ 2014, 11:14 IST

ದೊಡ್ಡಬಳ್ಳಾಪುರ: ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರ ಜಗತ್ತಿನಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ಇಂತಹ ಕಾಲದಲ್ಲಿ ಮಹಿಳೆಯರು ವಿವೇ­ಚನೆ ಬೆಳೆಸಿಕೊಳ್ಳುವ ಬದಲು ಹೊಟ್ಟೆ, ಬಟ್ಟೆ ಕಟ್ಟಿ ಒಡವೆ ವಸ್ತ್ರಗಳನ್ನು ಸಂಪಾ­ದಿಸಲು ಹೆಚ್ಚಿನ ಗಮನ ಕೊಡು­ತ್ತಾರೆ. 

ಟಿ.ವಿಗಳಲ್ಲಿ ಬರುವ ಜ್ಯೋತಿಷ ಮತ್ತು ಭವಿಷ್ಯ ಹೇಳುವ ಜನರಿಗೆ ಹೆಚ್ಚಿನ ಮನ್ನಣೆ ನೀಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ವಿಷಾ­ದಿಸಿದರು.

ನಗರದ ಕನ್ನಡ ಜಾಗೃತ ಭವನದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾ­ಚರಣೆ ಕಾರ್ಯಕ್ರಮದಲ್ಲಿ ಭಾಗ­ವಹಿಸಿ ಅವರು ಮಾತನಾಡಿದರು.

ಮಹಿಳೆಯರ ಉನ್ನತಿಗಾಗಿ ಹೋರಾಟ ಮಾಡಿದವರ ಸಾಲಿನಲ್ಲಿ ದೊಡ್ಡ­ಬಳ್ಳಾ­ಪುರದ ಸಾಹಿತಿ ಡಾ.ಅನು­ಪಮಾ ನಿರಂಜನ, ಭೀಮಕ್ಕ ಮುಂತಾ­ದವರು ಇದ್ದಾರೆ ಎಂದು ಸ್ಮರಿಸಿದರು.

ಸಮುದಾಯ ಸಂಘಟನೆ ರಾಜ್ಯ ಕಾರ್ಯ­ದರ್ಶಿ ಕೆ.ಎಸ್.ವಿಮಲಾ ಮಾತ­ನಾಡಿ, ಜಾತಿ ಮತ್ತು ಧರ್ಮ­ವನ್ನು ಬಿಟ್ಟು ನಾವೆಲ್ಲಾ ಮಹಿಳೆಯರು, ನಾವು ಮನುಷ್ಯರು ಎಂದು ಅರಿವು ಮೂಡಿ­ಸಲು ೧೦೪ ವರ್ಷಗಳ ಹಿಂದೆ ವಿಶ್ವ ಮಹಿಳಾ ದಿನಾಚರಣೆ ಅಸ್ತಿತ್ವಕ್ಕೆ ಬಂತು.  ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ, ದ್ವೇಷ ಮತ್ತು ಅಸೂಯೆ ಹೆಚ್ಚಾಗುತ್ತಿರುವ ಈ ದಿನ­ಗಳಲ್ಲಿ ಮಹಿಳೆಯರ ಧ್ವನಿ ಬದಲಾಗ­ಬೇಕಾ­ಗಿದೆ. ಚಿಂತನೆ ನಡೆಸಬೇಕಾಗಿದೆ ಎಂದರು.

ಬಿಜಿವಿಎಸ್‌ನ ರಾಜ್ಯ ಸಂಚಾಲಕಿ ಎನ್.­ಪ್ರಭಾ ಮಾತನಾಡಿ, ‘ಕುಟುಂಬ­ಗಳಲ್ಲಿ ಸಾಮರಸ್ಯ ಕಡಿಮೆಯಾಗುತ್ತಿದೆ, ಮನೆಗಳಲ್ಲಿ ಹಿರಿಯರನ್ನು ಗೌರವಿಸುವ ಗುಣ ಇಲ್ಲವಾಗುತ್ತಿದೆ. ಅದನ್ನೆಲ್ಲ ಮಹಿ­ಳೆ­ಯರು ಸಾಧಿಸಿಬೇಕಾಗಿದೆ’ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ಕಮಲಾದೇವಿ ಚಟ್ಟೋಪಾಧ್ಯಾಯ ಮಹಿಳಾ ಚಿಂತನಾ ವೇದಿಕೆಯ ಸಂಯೋ­ಜಕಿ ಕೆ.ಎಸ್.ಪ್ರಭಾ, ಕೊಂಗಾ­ಡಿ-­ಯಪ್ಪ ಕಾಲೇಜಿನ ಎನ್‌ಎಸ್‌­ಎಸ್ ಅಧಿಕಾರಿ ಪ್ರೊ.ಚಂದ್ರಪ್ಪ, ಮಹಿಳಾ ಸಮಾಜದ ಅಧ್ಯಕ್ಷೆ ಎಲ್.ಸಿ.­ದೇವಕಿ, ನಗರ­ಸಭಾ ಮಾಜಿ ಸದಸ್ಯೆ ಪ್ರಮೀಳಾ ಮಹಾದೇವ್,ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ನಳಿನಾ, ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆರ ಸಂಘ, ಗ್ರಾಮೀಣ ಅಭ್ಯುದಯ ಸೇವಾ ಸಂಘ, ಆರ್ಯ ವೈಶ್ಯ ಮಹಿಳಾ ಸಂಘ, ಗಾಯಿತ್ರಿ ಮಹಿಳಾ ಸಂಘ ಮತ್ತು ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಮುಂತಾದ  ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.