ADVERTISEMENT

‘ಶೇ 90ರಷ್ಟು ಒಳಚರಂಡಿ ವ್ಯವಸ್ಥೆ ಪೂರ್ಣ’

ಶಾಸಕ ವೆಂಕಟರಮಣಯ್ಯ ಅಧ್ಯಕ್ಷತೆಯಲ್ಲಿ ವಾರ್ಡ್ ಸಭೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 10:17 IST
Last Updated 20 ಡಿಸೆಂಬರ್ 2013, 10:17 IST

ದೊಡ್ಡಬಳ್ಳಾಪುರ: ‘ನಗರದಲ್ಲಿ ಒಳಚರಂಡಿ ಕಾಮಗಾರಿಗಳು ಶೇ ೯೦ ಭಾಗ ಮುಗಿದಿದ್ದು, ಮನೆಗಳ ಸಂಪರ್ಕ ನೀಡುವುದು ಬಾಕಿ ಇದೆ. ಇನ್ನೆರಡು ತಿಂಗಳಲ್ಲಿ ಒಳಚರಂಡಿ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ’ ಎಂದು ಒಳಚರಂಡಿ ಕಾಮಗಾರಿ ಸಹಾಯಕ ಎಂಜಿನಿಯರ್‌ ಚಂದ್ರಶೇಖರ್ ತಿಳಿಸಿದರು.

ನಗರಸಭೆ ವತಿಯಿಂದ ಗಾಣಿಗರಪೇಟೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆಯಲ್ಲಿ ನಡೆದ ೨೪ನೇ ವಾರ್ಡ್ ಸಭೆಯಲ್ಲಿ ಅವರು ಮಾತನಾಡಿದರು.

ಒಳಚರಂಡಿ ಕಾಮಗಾರಿಗಳಲ್ಲಿ ರಸ್ತೆಗಳನ್ನು ಅಗೆದು ಅದನ್ನು ಮತ್ತೆ ಸರಿಪಡಿಸುವುದು ಗುತ್ತಿಗೆದಾರರ ಹೊಣೆಗಾರಿಕೆ. ಆದರೆ ಇದನ್ನು ಗುತ್ತಿಗೆ ಸಂಸ್ಥೆ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.

ಇದಕ್ಕೆ ಉತ್ತರಿಸಿದ ಅಭಿಯಂತರರು ತಾವು ಅಧಿಕಾರ ವಹಿಸಿಕೊಂಡು ೬ ತಿಂಗಳಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ವರ್ಷದಿಂದ ನಮ್ಮ ವಾರ್ಡ್‌ಗೆ ನೀರು ಬಿಟ್ಟಿಲ್ಲ. ನೀರಿನ ತೆರಿಗೆಯನ್ನು ಮನ್ನಾ ಮಾಡಿ. ಈಗ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಸುಧಾರಿಸಿದೆ. ಆದರೆ ಚರಂಡಿ ಹಾಗೂ ರಸ್ತೆ ದುರವಸ್ಥೆ ಸರಿ ಮಾಡಿಕೊಡಿ ಎಂದು ಸಾರ್ವಜನಿಕರು ದೂರಿದರು.

‘ಪೊಲೀಸ್ ಠಾಣೆ ಊರ ಹೊರಗಿರುವುದರಿಂದ ಆ ವೇಳೆಯಲ್ಲಿ ದೂರು ನೀಡಲು ಆಗುವುದಿಲ್ಲ. ಆದ್ದರಿಂದ ನಗರದ ಮುಖ್ಯ ರಸ್ತೆಯಲ್ಲಿರುವ ಪೊಲೀಸ್ ಠಾಣೆಗೆ ಸಿಬ್ಬಂದಿ ನೀಡಿ ಸಾರ್ವಜನಿಕರು ದೂರು ನೀಡಲು ಅನುವು ಮಾಡಿಕೊಡಬೇಕು’ ಎಂದು ನಿವಾಸಿ ರಾಜು ಮನವಿ ಮಾಡಿದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ‘ತಾಲ್ಲೂಕಿನಲ್ಲಿ ಒಳಚರಂಡಿ ಕಾಮಗಾರಿಗಳು ನಡೆಯುತ್ತಿರುವುದರಿಂದ ರಸ್ತೆ ಕೆಲಸಗಳು ವಿಳಂಬವಾಗಿವೆ. ಕೊಳಚೆ ನಿವಾಸಿಗಳಿಗೆ ಹಕ್ಕು ಪತ್ರ ನೀಡುವಂತೆ ಮಂಡಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದ್ದು, ಈ ಬಗ್ಗೆ
ಗಂಭೀರ ಕ್ರಮ ಕೈಗೊಳ್ಳಲಾಗುವುದು. ಅರ್ಹ ಫಲಾನುಭವಿಗಳು ಮಾಸಾಶನ, ಪಿಂಚಣಿ, ಪಡಿತರ ಮೊದಲಾದವುಗಳು ಬಾರದೇ
ಇದ್ದರೆ ಅರ್ಜಿ ಸಲ್ಲಿಸಬಹುದಾಗಿದೆ. ವಾರ್ಡ್ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳಿಗೆ ಪರಿಹಾರ ನೀಡಲಾಗುತ್ತಿದ್ದು, ಗ್ರಾಮ ಸಭೆಗಳ ಯಶಸ್ಸು ಇದಕ್ಕೆ ಸ್ಫೂರ್ತಿಯಾಗಿದೆ. ಆದರೆ ಇದನ್ನು ಅನಗತ್ಯವಾಗಿ ಟೀಕಿಸಿವುದು ಸರಿಯಲ್ಲ’ ಎಂದರು.

ನಗರಸಭೆ ಪೌರಾಯುಕ್ತ ಡಾ.ಪಿ.ಬಿಳಿಕೆಂಚಪ್ಪ ಮಾತನಾಡಿ, ಸರ್ಕಾರ ಶೌಚಾಲಯಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ವಿಶೇಷವಾಗಿ ಎಸ್.ಸಿ, ಎಸ್.ಟಿ ಜನರಿಗೆ ಹಣದ ಕೊರತೆಯಿಲ್ಲ. ನಗರ ಸಭೆಯಲ್ಲಿ ಯಾವುದೇ ಕೆಲಸವಾಗಬೇಕಾದರೆ ಮಧ್ಯವರ್ತಿಗಳನ್ನು ಅವಲಂಬಿಸಬೇಡಿ. ಅಧಿಕಾರಿಗಳು ವಿಳಂಬ ಮಾಡಿದರೆ ನಮಗೆ ದೂರು ನೀಡಿ ಎಂದರು.

ವಾರ್ಡ್‌ ಸಭೆಯಲ್ಲಿ ನಗರಸಭಾ ಸದಸ್ಯ ರಾದ ಸುವರ್ಣ, ಜಯಲಕ್ಷ್ಮೀ, ಮಾಜಿ ನಗರ ಸಭಾ ಸದಸ್ಯ ಸೋಮರುದ್ರ ಶರ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.