ADVERTISEMENT

2012ಕ್ಕೆ ದೇವನಹಳ್ಳಿ- ತಿರುಪತಿ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ದೇವನಹಳ್ಳಿ:  `2012ರ ಡಿಸೆಂಬರ್ ವೇಳೆಗೆ ಬೆಂಗಳೂರಿನಿಂದ- ದೇವನಹಳ್ಳಿ -ಚಿಕ್ಕಬಳ್ಳಾಪುರ ಮಾರ್ಗವಾಗಿ ತಿರುಪತಿಗೆ ನೇರ ರೈಲು ಸಂಚಾರ ಪ್ರಾರಂಭವಾಗಲಿದೆ~ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ದೇವನಹಳ್ಳಿ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸಾರ್ವಜನಿಕರ ಅಹವಾಲುಗಲನ್ನು ಸ್ವೀಕರಿಸಿ ಮಾತನಾಡಿದರು.

`ಪ್ರಸ್ತುತ ಕೋಲಾರ ಚಿಕ್ಕಬಳ್ಳಾಪುರ ಹಾಗೂ ದೇವನಹಳ್ಳಿ ರೈಲ್ವೆ ಮಾರ್ಗದಲ್ಲಿರುವ 87 ಲೆವಲ್ ಕ್ರಾಸಿಂಗ್ ಮತ್ತು ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಕಾಮಗಾರಿ ನಡೆಯಲಿದ್ದು, 2014-15 ನೇ ಸಾಲಿಗೆ ಸಂಪೂರ್ಣ ಪೂರ್ಣಗೊಳಿಸಲಾಗುವುದು~ಎಂದರು.

`ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಮೆಟ್ರೋ ರೈಲು ನಿಲ್ದಾಣ ಯೋಜನಾ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ. ಆದರೆ ದೇವನಹಳ್ಳಿಯವರೆಗೂ ವಿಸ್ತರಿಸಲು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಪರಿಶೀಲಿಸಲಾಗುವುದು~ ಎಂದರು. 

ಜಿ.ಪಂ ಸದಸ್ಯ ಬಿ.ರಾಜಣ್ಣ ಮಾತನಾಡಿ, `ತಾಲ್ಲೂಕಿನ ರೈಲು ಮಾರ್ಗದಲ್ಲಿ ಹನ್ನೆರಡು ಗೇಟ್‌ಗಳಿದ್ದು, ವ್ಯವಸ್ಥಿತವಾಗಿ ನಿರ್ವಹಣೆ ಇಲ್ಲದೆ ಅನೇಕ ಕಡೆ ಅಫಘಾತವಾಗುತ್ತಿದೆ. ಪಟ್ಟಣದ ಬೈಪಾಸ್ ರಸ್ತೆಬದಿಯಲ್ಲಿರುವ ರೈಲ್ವೆ ಗೇಟ್‌ಬಳಿ ವಿನಾಯಕ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮೇಲ್ ಸೇತುವೆ ಅವಶ್ಯಕತೆ ಇದ್ದು, ತ್ವರಿತವಾಗಿ ಬಡಾವಣೆಯ ನಿವಾಸಿಗಳಿಗೆ ಅನುಕೂಲ ಕಲ್ಪಿಸುವಂತೆ ಸಚಿವರನ್ನು ಕೋರಿದರು. 

 ಶಾಸಕ ಕೆ.ವೆಂಕಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ಎಸ್.ಸಿ ಘಟಕ ಅಧ್ಯಕ್ಷ ಎ.ಚಿನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ, ಎಸ್.ಟಿ,ಘಟಕ ಅಧ್ಯಕ್ಷ ಮಜ್ಜಿಗೆ ,ಹೊಸಹಳ್ಳಿ ವಿ.ಎನ್.ವೆಂಕಟೇಶ್, ಪುರಸಭೆ ಅಧ್ಯಕ್ಷೆ ರತ್ನಮ್ಮ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಿ.ಎನ್.ವೇಣುಗೋಪಾಲ್, ಸೋಮಶೇಖರ್, ಟೌನ್ ವಿ.ಎಸ್.ಎಸ್.ಎನ್ ಬ್ಯಾಂಕ್ ಅಧ್ಯಕ್ಷ ಎನ್.ರಘು, ಕೃಷಿಕ ನಿರ್ದೇಶಕ ಎಸ್.ನಾಗೇಗೌಡ, ಎಸ್.ಸಿ.ಘಟಕ ಪ್ರಧಾನ ಕಾರ್ಯದರ್ಶಿ ಮಾರಪ್ಪ, ಚೌಡಪ್ಪನಹಳ್ಳಿ ಎಂ.ಲೋಕೇಶ್ ಆರ್.ಪ್ರಕಾಶ್, ತಾ.ಪಂ ಮಾಜಿ ಅಧ್ಯಕ್ಷ ವಿ.ನಾರಾಯಣ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.