ADVERTISEMENT

‘ಮಹದಾಯಿ ಹೋರಾಟಕ್ಕೆ ಬೆಂಬಲ ನೀಡಿ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 8:52 IST
Last Updated 3 ಜನವರಿ 2018, 8:52 IST

ದೇವನಹಳ್ಳಿ: ರಾಜ್ಯದ ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಜ್ವಲಂತ ಸಮಸ್ಯೆಯಾಗಿರುವ ಮಹದಾಯಿ ನದಿ ನೀರು ಹೋರಾಟವನ್ನು ಕನ್ನಡ ಪ್ರಗತಿಪರ ಸಂಘಟನೆಗಳು ಬೆಂಬಲಿಸಬೇಕುಎಂದು ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಮನವಿ ಮಾಡಿದರು.

ಬೆಂಗಳೂರಿನ ಯಲಹಂಕದಲ್ಲಿ ಮಂಗಳವಾರ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ 8ನೇ ವರ್ಷದ ವಾರ್ಷಿಕೋತ್ಸವ ಮತ್ತು ವೇದಿಕೆ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಮಾನವೀಯತೆ ನೆಲೆಗಟ್ಟಿನಲ್ಲಿ ಕುಡಿಯುವ ನೀರಿನ ರಾಜ್ಯದ ಪಾಲನ್ನು ಬಿಡುತ್ತಿಲ್ಲ. ನ್ಯಾಯಾಧಿಕರಣದಲ್ಲಿದೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಿವೆ. ನ್ಯಾಯಾಧಿಕರಣ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ತಿಳಿಸಿದೆ. ಆ ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಮಾನ್ಯ ಮಾಡುತ್ತಿಲ್ಲ. ಜನವರಿ 31 ರಂದು ಗೋವಾ ಸರ್ಕಾರದ ನಿಲುವು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಉತ್ತರ ಕರ್ನಾಟಕದ ಜನತೆಗೆ ನೈತಿಕ ಬೆಂಬಲ ನೀಡಬೇಕಾಗಿದೆ ಎಂದರು.

ADVERTISEMENT

ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ರೈತರ ಮತ್ತು ಯೋಧರ ಬಗ್ಗೆ ಸರ್ಕಾರಗಳು ಕಾಳಜಿ ವಹಿಸಬೇಕು ಎಂದರು.

ರಾಜ್ಯ ಮತ್ತು ಕೇಂದ್ರದಲ್ಲಿರುವ ಸಚಿವರ ಅಕ್ರಮ ಅದಾಯ ಮೂಲದ ಶೇ 25 ರಷ್ಟು ಭಾಗ ರಾಜ್ಯದಲ್ಲಿ ತೊಡಗಿಸಿಕೊಂಡರೆ ಬೆಳ್ಳಿ ಮತ್ತು ಬಂಗಾರದ ಲೇಪನದ ಹೊದಿಕೆಯ ರಸ್ತೆ ನಿರ್ಮಾಣ ಮಾಡಬಹುದು. ಒಂದು ಬಾರಿ ಶಾಸಕ ಮತ್ತು ಸಚಿವರಾದರೆ ಸಾವಿರಾರು ಕೋಟಿ ಹಣ ಗಳಿಸುತ್ತಾರೆ. ತತ್ವ ಸಿದ್ಧಾಂತ, ಸಮಾಜಸೇವೆಯ ಕಾಳಜಿ ಇಲ್ಲದ ರಾಜಕಾರಣಿಗಳಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದರು.

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ವೇದಿಕೆ ಎಂಟನೇ ವರ್ಷಕ್ಕೆ ಕಾಲಿಟ್ಟಿದೆ. ಅನೇಕ ಹೋರಾಟ, ಪ್ರತಿಭಟನೆಗಳಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದೆ. ಪ್ರಗತಿಪರ ಸಂಘಟನೆಗಳು ಇನ್ನಷ್ಟು ಸಕ್ರಿಯಗೊಂಡು ಈ ನೆಲಜಲದ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಬೇಕಾಗಿದೆ ಎಂದರು.

₹600 ಕೋಟಿ ಮೌಲ್ಯದ ಅಸ್ತಿ ಒತ್ತುವರಿ

ನಾಗೇನಹಳ್ಳಿ ಕೃಷ್ಣ ಮೂರ್ತಿ ಮಾತನಾಡಿ, ನಾಡಿನ ನೆಲ, ಜಲ, ಭಾಷೆ ವಿಚಾರದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ವಿರೋಧ ಪಕ್ಷಗಳು ಕಣ್ಮುಚ್ಚಿ ಕುಳಿತಿವೆ. ರಾಜ್ಯಕ್ಕೆ ಅನೇಕ ಬಾರಿ ಅನ್ಯಾಯ ಅಗುತ್ತಿದ್ದು, ಚಕಾರ ಎತ್ತದ ಸ್ಥಿತಿಯಲ್ಲಿ ರಾಜಕಾರಣಿಗಳಿದ್ದಾರೆ. ದೇವನಹಳ್ಳಿ ಮತ್ತು ಯಲಹಂಕ ತಾಲ್ಲೂಕಿನಲ್ಲಿ ಪ್ರಸ್ತುತ ₹600 ಕೋಟಿ ಮೌಲ್ಯದ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂದರು.

ಮುಖ್ಯಮಂತ್ರಿಗೆ ಸಮಗ್ರ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಆಡಳಿತ ಮತ್ತು ವಿರೋಧ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ. ಸರ್ಕಾರಕ್ಕೆ ನೈತಿಕತೆ ಇದ್ದರೆ ಸಮಗ್ರ ತನಿಖೆ ನಡೆಸಿ ಅಸ್ತಿ ವಶಪಡಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.