ADVERTISEMENT

ಮಾದಿಗ ಸಮುದಾಯಕ್ಕೆ ನ್ಯಾಯ ನೀಡಲಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 6:52 IST
Last Updated 10 ಜನವರಿ 2018, 6:52 IST

ದೇವನಹಳ್ಳಿ: ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯಕ್ಕೆ ಸರ್ಕಾರ ನ್ಯಾಯ ನೀಡಲಿ ಎಂದು ಮಾದರ ಮಹಾಸಭಾ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಬಿ.ಕೆ.ಶಿವಪ್ಪ ಒತ್ತಾಯಿಸಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜಿಲ್ಲಾ ಮತ್ತು ತಾಲ್ಲೂಕು ಮಾದರ ಸಂಘದ ವತಿಯಿಂದ ಜ.11ರಂದು ಜಿಲ್ಲಾ ಕೇಂದ್ರದಲ್ಲಿ ನ್ಯಾ.ಎ.ಜೆ.ಸದಾಶಿವ ವರದಿ ಜಾರಿಗೆ ಅಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಕರಪತ್ರ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1997ರ ಅಕ್ಟೋಬರ್‌ 13ರಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕು ಎಂಬ ಹೋರಾಟ ನಡೆದ ಪರಿಣಾಮ 2005 ಸೆ.24 ರಂದು ನ್ಯಾ ಎ.ಜೆ.ಸದಾಶಿವ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಸತತ ಏಳೂವರೆ ವರ್ಷ ಅಧ್ಯಯನ ನಡೆಸಿದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೂ ಸರ್ಕಾರ ಮಾದಿಗರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ADVERTISEMENT

ಮಾದರ ಜಿಲ್ಲಾ ಘಟಕ ಗೌರವಾಧ್ಯಕ್ಷ ವಿ.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಸದಾಶಿವ ಆಯೋಗ ವರದಿ ಅನ್ವಯ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಶೇ 6, ಛಲವಾದಿ ಸಮುದಾಯಕ್ಕೆ ಶೇ5, ಇತರೆ ಸಮುದಾಯ ಶೇ4 ಹೀಗೆ ಒಟ್ಟು ಶೇ15 ರಷ್ಟು ಮಾತ್ರ ಮೀಸಲಾತಿ ಪ್ರಸ್ತುತ ಇದೆ. ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಭರವಸೆಯಲ್ಲೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಮಾದರ ಮಹಾಸಭಾ ಜಿಲ್ಲಾ ಸಂಘ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಮಾತನಾಡಿ, ಸಾಮಾಜಿಕ ನ್ಯಾಯ ಕೇಳುತ್ತಿದ್ದೇವೆ ಹೊರತು ಭಿಕ್ಷೆಯಲ್ಲ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಿ. ಛಲವಾದಿ ಮತ್ತು ಮಾದಿಗ ಜನಾಂಗದ ಬುದ್ಧಿಜೀವಿಗಳು ಒಂದೆಡೆ ಚರ್ಚೆ ನಡೆಸಿ ವರದಿ ಅಂಗಿಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಅಗ್ರಹಿಸಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾದರ ಮಹಾಸಭಾ ಜಿಲ್ಲಾ ಕಾರ್ಯಧ್ಯಕ್ಷ ಡಾ.ಎಸ್.ಎಂ.ಸುಬ್ಬರಾಜ್, ಜಿಲ್ಲಾ ಉಪಾಧ್ಯಕ್ಷ ಮುನಿಶಾಮಪ್ಪ, ತಾಲ್ಲೂಕು ಮಾದರ ಮಹಾಸಭಾ ಅಧ್ಯಕ್ಷ ಗೊಡ್ಲು ಮುದ್ದೇನಹಳ್ಳಿ ಮುನಿರಾಜು, ವಿವಿಧ ಘಟಕ  ಪದಾಧಿಕಾರಿಗಳಾದ ಮುನಿಸ್ವಾಮಿ, ಶ್ರೀನಿವಾಸ್, ರಾಜಶೇಖರ್, ಯಲ್ಲಪ್ಪ, ಚಿನ್ನಪ್ಪ, ಶ್ರೀರಾಮ್, ಲಕ್ಷ್ಮಿನಾರಾಯಣ, ದೇವರಾಜ್, ಪ್ರಕಾಶ್, ಮುನಿನಾರಾಯಣಪ್ಪ ಇದ್ದರು.

ಜ.13 ರಂದು ಸಭೆ ಸಿಎಂ ಭರವಸೆ

ಗೌರವಾಧ್ಯಕ್ಷ ವಿ.ನಾರಾಯಣಸ್ವಾಮಿ ಮಾತನಾಡಿ, ಕಳೆದ ವರ್ಷ ನ.11 ರಂದು ವಿಧಾನಸೌಧ ಚಲೋ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಸಚಿವ ಆಂಜನೇಯ ಹೋರಾಟಗಾರರಿಗೆ ಭರವಸೆ ನೀಡಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನ.31 ರಂದು ಸಮುದಾಯದ ಶಾಸಕರ ಮತ್ತು ಮುಖಂಡರ ಸಭೆ ಕರೆಯುವುದಾಗಿ ತಿಳಿಸಿದ್ದರು. ವಿಪರ್ಯಾಸವೆಂದರೆ ನ.29 ರಂದು ಮಾದಿಗರ ಮೀಸಲಾತಿ ಹೋರಾಟ ಸಮಿತಿ ವಿರುದ್ಧ ಇತರೆ ಸಮುದಾಯವನ್ನು ಎತ್ತಿಕಟ್ಟಿ ಸಭೆ ಮುಂದೂಡುವಂತೆ ಮಾಡಿದ್ದಾರೆ ಎಂದು ದೂರಿದರು.

ಜ.13 ರಂದು ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಸಭೆ ನಡೆಯುವ ಬಗ್ಗೆ ಖಾತರಿ ಇಲ್ಲ. ಚುನಾವಣೆ ಸಮೀಸಿಸುತ್ತಿರುವುದರಿಂದ ಕಾಲಹರಣ ಮಾಡಿ ನಂತರ ಚುನಾವಣೆ ನೀತಿ ಸಂಹಿತೆ ಎಂದು ಬಿಂಬಿಸುವ ಸಾಧ್ಯತೆ ಇದೆ. ನಿಗದಿತ ಜ.13 ರ ಸಭೆ ಯಾವುದೇ ಕಾರಣಕ್ಕೆ ಮುಂದೂಡಬಾರದು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.