ADVERTISEMENT

ವಿದ್ಯಾರ್ಥಿ, ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 9:00 IST
Last Updated 19 ಜನವರಿ 2018, 9:00 IST

ದೇವನಹಳ್ಳಿ: ತಾಲ್ಲೂಕಿನ ಆಯಾ ಗ್ರಾಮಗಳ ರಸ್ತೆಬದಿ ಮತ್ತು ನಗರದ ವಿವಿಧ ಭಾಗಗಳಲ್ಲಿ ನಿರ್ಮಾಣ ಮಾಡಲಾಗಿರುವ ಪ್ರಯಾಣಿಕರ ತಂಗುದಾಣಗಳು ಸೂಕ್ತ ನಿರ್ವಹಣೆಯಿಲ್ಲದೆ ನನೆಗುದಿಗೆ ಬಿದ್ದಿವೆ ಎಂದು ಸ್ಥಳೀಯರು ದೂರಿದ್ದಾರೆ.

ಇಲ್ಲಿನ ಸರ್ಕಾರಿ ಸಮುದಾಯದ ಆರೋಗ್ಯ ಕೇಂದ್ರ ಮುಂಭಾಗದಲ್ಲಿ ನಿರ್ಮಿಸಲಾಗಿರುವ ತಂಗುದಾಣ ನಿರ್ವಹಣೆ ಇಲ್ಲದೆ ಕಬ್ಬಿಣದ ಪೈಪ್ ಮತ್ತು ಸೀಟ್‌ಗಳು ತುಕ್ಕು ಹಿಡಿದಿವೆ. ಸುತ್ತೆಲ್ಲಾ ಗಿಡಗಂಟಿ ಬೆಳೆದು, ವಿಷ ಜಂತುಗಳ ಅಶ್ರಯ ತಾಣವಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ನೂರಾರು ಸಾರ್ವಜನಿಕರು ತಾಸುಗಟ್ಟಲೇ ಹೊರಗೆ ನಿಲ್ಲಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ದೊಡ್ಡಕುರುಬರಕುಂಟೆ ನಿವಾಸಿ ಮುನಿಯಮ್ಮ.

ಆಸ್ಪತ್ರೆ ಪಕ್ಕದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಐಟಿಐ ಕಾಲೇಜಿದೆ ಇದೆ. ಇಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಇರುವ ಏಕೈಕ ತಂಗುದಾಣ ಇದು. ಸಮರ್ಪಕ ನಿರ್ವಹಣೆ ಇಲ್ಲದೆ ಅವ್ಯವಸ್ಥೆ ಕೂಪವಾಗಿದೆ ಎಂದು ವಿದ್ಯಾರ್ಥಿಗಳಾದ ಸುಭಾಷ್ ಮತ್ತು ಅಭಿನವ್ ಆರೋಪಿಸಿದ್ದಾರೆ.

ADVERTISEMENT

ಅನೇಕ ತಂಗುದಾಣಗಳು ಟೀ, ಕಾಫಿ ಸಿಗರೇಟ್‌ ಮಾರಾಟದ ಕೇಂದ್ರಗಳಾಗಿವೆ. ಸರ್ಕಾರದ ವತಿಯಿಂದ ಪ್ರತಿ ತಂಗುದಾಣ ನಿರ್ಮಿಸಲು ₹ 5 ರಿಂದ ₹ 8ಲಕ್ಷದವರೆಗೆ ವೆಚ್ಚ ಮಾಡಿಲಾಗಿದೆ. ಆದರೆ, ಎಲ್ಲಾ ತಂಗುದಾಣಗಳೂ ಅಕ್ರಮ ಚುಟುವಟಿಕೆಗಳ ತಾಣಗಳಾಗುತ್ತಿವೆ. ಸಂಬಂಧಿಸಿದವರು ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕೆಂದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.