ADVERTISEMENT

ಸಾರಿಗೆ ಬಸ್‌ ಸಂಚಾರ ವ್ಯವಸ್ಥೆ ಸರಿಪಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 6:01 IST
Last Updated 10 ಜುಲೈ 2022, 6:01 IST
ವಿಜಯಪುರದ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಕಡೆಗೆ ಸಂಚರಿಸಲು ನಿಂತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು
ವಿಜಯಪುರದ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಕಡೆಗೆ ಸಂಚರಿಸಲು ನಿಂತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು   

ವಿಜಯಪುರ:ಪಟ್ಟಣದಿಂದ ಬೆಂಗಳೂರಿನ ಮೆಜೆಸ್ಟಿಕ್ ಕಡೆಗೆ ಹೋಗುವ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಬೆಂಗಳೂರಿನ ವಿಧಾನಸೌಧ, ಮೈಸೂರು ಬ್ಯಾಂಕ್ ವೃತ್ತ, ಕಾವೇರಿ ಭವನ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗಲು ವ್ಯವಸ್ಥೆ ಮಾಡಿಕೊಡುವಂತೆ ಬೆಂಗಳೂರಿನ ಕಡೆಗೆ ಸಂಚರಿಸುವ ಉದ್ಯೋಗಿಗಳು ಸಾರಿಗೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಚಿಕ್ಕಬಳ್ಳಾಪುರ ಘಟಕ ಮತ್ತು ಬಾಗೇಪಲ್ಲಿ ಘಟಕದಿಂದ ಬೆಂಗಳೂರಿನ ಕಡೆಗೆ ಮೊದಲು ಸಂಚರಿಸುತ್ತಿದ್ದ ಬಸ್‌ಗಳು ವಿಧಾನಸೌಧ, ಕಾವೇರಿ ಭವನ, ಮೈಸೂರು ಬ್ಯಾಂಕ್ ವೃತ್ತದ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಚರಿಸುತ್ತಿದ್ದವು. ಇದರಿಂದ ನಮಗೂ ತುಂಬಾ ಅನುಕೂಲಕರವಾಗಿತ್ತು ಎಂದು ತಿಳಿಸಿದ್ದಾರೆ.

ಈ ಹಿಂದೆ ವಿಧಾನಸೌಧ, ಮಹಾರಾಣಿ ಕಾಲೇಜು ಮಾರ್ಗವಾಗಿಯೂ ಸಂಚರಿಸುತ್ತಿದ್ದವು. ಸುಮಾರು ಎರಡು ವರ್ಷಗಳಿಂದ ಮಹಾರಾಣಿ ಕಾಲೇಜಿನಿಂದ ಮೈಸೂರು ಬ್ಯಾಂಕ್‌ವರೆಗೂ ರಸ್ತೆ ಕಾಮಗಾರಿ ನಡೆಸಲು ರಸ್ತೆಯನ್ನು ಮುಚ್ಚಲಾಗಿದೆ. ಆದ್ದರಿಂದ ತಾತ್ಕಾಲಿಕವಾಗಿ ಶಿವಾನಂದ ಸರ್ಕಲ್, ಸ್ವಸ್ತಿಕ್ ಮಾರ್ಗವಾಗಿ ಮೆಜೆಸ್ಟಿಕ್‌ಗೆ ಹೋಗಲು ಸೂಚನೆ ನೀಡಿದ್ದರು ಎಂದು ತಿಳಿಸಿದ್ದಾರೆ.

ADVERTISEMENT

ಮಹಾರಾಣಿ ಕಾಲೇಜಿನಿಂದ ಮೈಸೂರು ಬ್ಯಾಂಕಿನವರೆಗೂ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ರಸ್ತೆಯು ಸಂಚಾರಕ್ಕೆ ಮುಕ್ತವಾಗಿದ್ದರೂ ಈ ರಸ್ತೆಯಲ್ಲಿ ಬಸ್‌ಗಳು ಸಂಚರಿಸುತ್ತಿಲ್ಲ. ಈ ರಸ್ತೆಯಲ್ಲಿ ಬಸ್‌ಗಳು ಚಲಿಸಿದರೆ ಈ ಭಾಗದಿಂದ ವಿವಿಧ ಕೆಲಸದ ನಿಮಿತ್ತ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಈ ಭಾಗದಲ್ಲಿ ವಿಧಾನಸೌಧ, ರಾಜ್ಯ ಲೆಕ್ಕಪತ್ರ ಇಲಾಖೆ, ಎಂ.ಎಸ್. ಬಿಲ್ಡಿಂಗ್, ಕರ್ನಾಟಕ ರಾಜ್ಯ ಮಾಹಿತಿ ಆಯೋಗ, ಮಹಾರಾಣಿ ಕಾಲೇಜು, ಭೂ ದಾಖಲೆಗಳ ನಿರ್ದೇಶಕರ ಕಚೇರಿ, ಸೈನ್ಸ್ ಕಾಲೇಜು, ಕಾವೇರಿ ಭವನ, ಹೈಕೋರ್ಟ್, ಸಿವಿಲ್ ಕೋರ್ಟ್, ನ್ಯಾಯಾಲಯಗಳ ಸಂಕೀರ್ಣ, ಕಂದಾಯ ಭವನ, ಕೆಎಟಿ, ಮೈಸೂರು ಬ್ಯಾಂಕ್ ಸರ್ಕಲ್, ಶಾಪಿಂಗ್ ಮಾಲ್‌ಗಳು ಸೇರಿದಂತೆ ವಿವಿಧ ಇಲಾಖೆಗಳಿವೆ. ಹಾಗಾಗಿ, ಬಸ್‌ಗಳನ್ನು ಈ ರಸ್ತೆಯಲ್ಲಿಯೇ ಸಂಚರಿಸುವಂತೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.