ADVERTISEMENT

ದೇವನಹಳ್ಳಿ: ಡಾಂಬರು ರಸ್ತೆ ಕಾಣದ ಚಪ್ಪರದಹಳ್ಳಿ 

ಜಿಲ್ಲಾಡಳಿತ ಭವನದ ಸಮೀಪ ಇದ್ದರೂ ಸೌಲಭ್ಯ ಮರೀಚಿಕೆ

ವಡ್ಡನಹಳ್ಳಿ ಬೊಜ್ಯನಾಯ್ಕ
Published 19 ಏಪ್ರಿಲ್ 2020, 19:33 IST
Last Updated 19 ಏಪ್ರಿಲ್ 2020, 19:33 IST
ಅರುವನಹಳ್ಳಿಯಿಂದ ಚಪ್ಪರದಹಳ್ಳಿ ಗ್ರಾಮಕ್ಕೆ ಪ್ರವೇಶ ಕಲ್ಪಿಸುವ ರಸ್ತೆ 
ಅರುವನಹಳ್ಳಿಯಿಂದ ಚಪ್ಪರದಹಳ್ಳಿ ಗ್ರಾಮಕ್ಕೆ ಪ್ರವೇಶ ಕಲ್ಪಿಸುವ ರಸ್ತೆ    

ದೇವನಹಳ್ಳಿ: ಈ ಊರಿಗೆ ಸಿಮೆಂಟ್ ರಸ್ತೆ ಇಲ್ಲ, ಚರಂಡಿಯೂ ಇಲ್ಲ. ವಾಸವಿರುವ ಸ್ಥಳೀಯರಿಗೆ ವಾಸದ ದೃಢೀಕರಣವಿಲ್ಲ. ಸ್ವಾತಂತ್ರ್ಯ ಬಂದು 70ವರ್ಷ ಕಳೆದರೂ ತಾಲ್ಲೂಕಿನ ಗಡಿ ಗ್ರಾಮ ಚಪ್ಪರದಹಳ್ಳಿಯ ಪರಿಸ್ಥಿತಿ ಇದು.ವಿಶ್ವಾನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಈ ಗ್ರಾಮ ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟವನ್ನು ಅವಲಂಬಿಸಿದೆ.

ಗ್ರಾಮಾಂತರ ಜಿಲ್ಲಾಡಳಿತ ಕೇಂದ್ರ ಸ್ಥಾನದಿಂದ ಮೂರು ಮುಕ್ಕಾಲು ಕಿ.ಮೀ ದೂರವಿರುವ ಚಪ್ಪರದಹಳ್ಳಿ ಇದುವರೆಗೂ ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ಅಚ್ಚರಿ ಸಂಗತಿ. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ’ಪ್ರಜಾವಾಣಿ’ ಸ್ಥಳೀಯರ ಸಮಸ್ಯೆ ಬಗ್ಗೆವರದಿ ಪ್ರಕಟಿಸಿ ರಾಜ್ಯದ ಗಮನ ಸೆಳೆದಿತ್ತು.ನಂತರ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಪರಿಶೀಲಿಸಿ ಮೂಲಸೌಲಭ್ಯ ಒದಗಿಸುವ ಸೌಲಭ್ಯ ನೀಡಿದರೂ ಇದುವರೆಗೂ ಈಡೇರಿರುವುದು ಶೇ30ರಷ್ಟು ಎಂದು ಆರೋಪಿಸುತ್ತಾರೆ ಸ್ಥಳೀಯರು.

ಚಪ್ಪರದಹಳ್ಳಿ 500 ವರ್ಷಗಳ ಇತಿಹಾಸ ಹೊಂದಿರುವ ಗ್ರಾಮ. ಪಕ್ಕದ ದೊಡ್ಡಬಳ್ಳಾಪುರ ತಾಲ್ಲೂಕು ಗಡಿ ಗ್ರಾಮ ಕೊನಘಟ್ಟದಿಂದ ಚಪ್ಪರದಹಳ್ಳಿವರೆಗೆ ಉ‌ತ್ತಮ ಗುಣಮಟ್ಟದ ರಸ್ತೆ ಇದೆ. ಆದರೆ,ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿರುವ ಚಪ್ಪರಹಳ್ಳಿಯಿಂದ ಚಿಕ್ಕ ಓಬದೇನಹಳ್ಳಿ ಮತ್ತು ಅರುವನಹಳ್ಳಿಗೆ ಇದುವರೆಗೂ ರಸ್ತೆ ಇಲ್ಲ. ಜಿಲ್ಲಾ ಕೇಂದ್ರಕ್ಕೆ ಹತ್ತಿರವಿದ್ದರೂ ಯಾವುದೇ ಪ್ರಯೋಜನವಿಲ್ಲ. ಕುಡಿಯುವ ನೀರು, ಬೀದಿ ದೀಪ ಗ್ರಾಮಕ್ಕೆ ಮರೀಚಿಕೆಯಾಗಿಯೇ ಉಳಿದಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

ಕಳೆದ ಆರೇಳು ವರ್ಷಗಳ ಹಿಂದೆ ಗ್ರಾಮದ ಅರ್ಧ ಭಾಗದ ಮತದಾರರು ಕೊನಘಟ್ಟ ಗ್ರಾಮಕ್ಕೆ ಮತ್ತೆ ಕೆಲವರು ಅರುವನಹಳ್ಳಿ ಗ್ರಾಮಕ್ಕೆ ಹೋಗಿ ಮತದಾನ ಮಾಡಬೇಕಿತ್ತು. ಇನ್ನೂ ಕೆಲವರಿಗೆ ಮತದಾರರ ಚೀಟಿಯೇ ಇರಲಿಲ್ಲ.ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿ‌ಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಗ್ರಾಮದಲ್ಲಿ ಪಶುಪಾಲನೆ ಇದೆ. ದಿನನಿತ್ಯ ಸರಾಸರಿ 250 ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತದೆ. ಬಹುತೇಕರ ಮನೆಗಳಿಗೆ ವಾಸದ ಹಕ್ಕುಪತ್ರಗಳಿಲ್ಲ. ಇದೊಂದು ದೊಡ್ಡ ಸಮಸ್ಯೆ ಎನ್ನುತ್ತಾರೆ ಗ್ರಾಮದ ಮುಖಂಡ ಕೆ.ಆರ್.ರಾಜಣ್ಣ.

ಈ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಇಲ್ಲ, ಶಾಲೆಯೂ ಇಲ್ಲ. ಶಾಲಾ– ಕಾಲೇಜುಗಾಗಿ ಪಕ್ಕದ ಕೊನಘಟ‌ಕ್ಕೆ ನಡೆದು ಹೋಗಬೇಕಿದೆ ಎಂದು ಸ್ಥಳೀಯರಾದ ನಾಗೇಶ್ ಗ್ರಾಮದ ಸಮಸ್ಯೆಗಳನ್ನು ತೆರೆದಿಟ್ಟರು.

ಗ್ರಾಮಕ್ಕೆ ಇರುವ ಒಂದೇ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸ್ವಂತ ಖರ್ಚಿನಲ್ಲಿ ನೀರು ಖರೀದಿಸಬೇಕಾಗಿದೆ ಎನ್ನುತ್ತಾರೆ ಗ್ರಾಮದ ಯುವಕ ನಟೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.