ADVERTISEMENT

ಹೋಬಳಿ ಕೇಂದ್ರದಲ್ಲೇ ಆಧಾರ್ ಕಾರ್ಡ್ ದೊರೆಯಲಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 13:14 IST
Last Updated 5 ಫೆಬ್ರುವರಿ 2020, 13:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೂಲಿಬೆಲೆ: ಹೊಸ ಆಧಾರ್ ಕಾರ್ಡ್ ಪಡೆಯಲು ಹಾಗೂ ತಿದ್ದುಪಡಿ ಮಾಡಿಸಲು ಗ್ರಾಮೀಣ ಪ್ರದೇಶದ ಜನರು ತಾಲ್ಲೂಕು ಕೇಂದ್ರಗಳಿಗೆ ಅಲೆಯುವುದು ಅನಿವಾರ್ಯವಾಗಿದೆ. ಹೋಬಳಿ ಕೇಂದ್ರದಲ್ಲೇ ಜನಸಾಮಾನ್ಯರಿಗೆ ಆಧಾರ್ ಕಾರ್ಡ್ ದೊರೆಯುವಂತಾಗಬೇಕು ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪಡಿತರ ಚೀಟಿ, ಬ್ಯಾಂಕ್ ಖಾತೆ, ವಿದ್ಯಾರ್ಥಿ ವೇತನ ಸೇರಿದಂತೆ ಸರ್ಕಾರಿ ಸವಲತ್ತುಗಳನ್ನು ಜನಸಾಮಾನ್ಯರು ಪಡೆಯಬೇಕಾದರೆ, ಆಧಾರ್ ಕಾರ್ಡು ನೀಡುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ. ಆದ್ದರಿಂದ ತಾಲ್ಲೂಕು ಕೇಂದ್ರಗಳಲ್ಲಿರುವ ಬ್ಯಾಂಕ್‌ಗಳು, ತಾಲ್ಲೂಕು ಕಚೇರಿ ಬಳಿ ಬೆಳಗಿನ ಜಾವದಿಂದಲೇ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತು ಟೋಕನ್ ತೆಗೆದುಕೊಳ್ಳಬೇಕಾಗಿದೆ. ಈ ಕಾಯುವ ಕಾಟ ವರ್ಷಗಳು ಕಳೆದರೂ ನಿಂತಿಲ್ಲ, ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಹೋಬಳಿ ಮಟ್ಟದಲ್ಲಿ ಸರ್ಕಾರ ಮಾಡಬೇಕು ಎಂದು ಸೂಲಿಬೆಲೆ ಮಂಜುನಾಥ್.ಎಸ್.ಕೆ ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿಗಳಲ್ಲಿ ಈಚೆಗೆ ಆಧಾರ್ ತಿದ್ದುಪಡಿ ವ್ಯವಸ್ಥೆಯನ್ನು ಇಲಾಖೆ ಜಾರಿಗೆ ತಂದಿತ್ತು. ಕೆಲವೇ ದಿನಗಳಲ್ಲಿ ಈ ತಿದ್ದುಪಡಿ ವ್ಯವಸ್ಥೆ ಗ್ರಾಮ ಪಂಚಾಯಿತಿಯಿಂದ ಸ್ಥಗಿತಗೊಂಡಿದೆ ಎಂದು ದೂರಿದ್ದಾರೆ.

ADVERTISEMENT

ಹೊಸಕೋಟೆ ತಾಲ್ಲೂಕು ಕೇಂದ್ರದ ಕರ್ಣಾಟಕ ಬ್ಯಾಂಕ್, ಆಂಧ್ರ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ತಾಲ್ಲೂಕು ಕಚೇರಿ, ನಂದಗುಡಿ ಹೋಬಳಿ ಕೇಂದ್ರದ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಕಾರ್ಡ್ ಮತ್ತು ತಿದ್ದುಪಡಿ ವ್ಯವಸ್ಥೆಯಿದೆ.

ಹೊಸಕೋಟೆ ತಾಲ್ಲೂಕು ಕೇಂದ್ರ ಹೊರತುಪಡಿಸಿದರೆ, ಸೂಲಿಬೆಲೆ ಪಟ್ಟಣ ಅತಿ ಹೆಚ್ಚು ಜನಸಂಖ್ಯೆಯಿರುವ ಕೇಂದ್ರವಾಗಿದೆ. ಈ ಹೋಬಳಿಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದಾರೆ. ಆದರೂ ಹೋಬಳಿಯಲ್ಲಿ ಹೊಸ ಅಥವಾ ತಿದ್ದುಪಡಿ ‘ಆಧಾರ್ ಕಾರ್ಡ್’ ಮಾಡಿ ಕೊಡುವ ಕೇಂದ್ರ ಇಲ್ಲ ಎಂಬ ಆಕ್ಷೇಪ ಜನರದು.

ಕಳೆದ ವರ್ಷ ಸೂಲಿಬೆಲೆ ಹೋಬಳಿಯ ಗಿಡ್ಡಪ್ಪನಹಳ್ಳಿ ಗ್ರಾಮದಿಂದ, ಜಿಲ್ಲಾಧಿಕಾರಿ ಕಚೇರಿಗೆ ಆಧಾರ್ ತಿದ್ದುಪಡಿ ಮಾಡಿಸಲು ಹೋಗುತ್ತಿದ್ದ, 4 ಜನ ಅಪಘಾತದಿಂದ ಮೃತಪಟ್ಟ ಘಟನೆ ದೇವನಹಳ್ಳಿ ಬಳಿ ನಡೆದಿತ್ತು. ಆಗ, ಹೋಬಳಿ ಕೇಂದ್ರ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಆಧಾರ್ ತಿದ್ದುಪಡಿ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಕೊಟ್ಟ ಆಶ್ವಾಸನೆ ನೀಡಿದ್ದರು. ಅದು ಸುಳ್ಳಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಅಂಜುಂ ತಾಜ್ ಮಹಬೂಬ್ ಹೇಳಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.