ಆನೇಕಲ್: ತಾಲ್ಲೂಕಿನ ಬೊಮ್ಮಸಂದ್ರದ ಬಳಿ ಭಾನುವಾರ ಮಧ್ಯಾಹ್ನ ದ್ವಿಚಕ್ರ ವಾಹನವೊಂದಕ್ಕೆ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ವಾಹನ ಸವಾರನ ಪತ್ನಿಯ ಎರಡು ಕಾಲು ಮುರಿದಿದೆ.
ತಮಿಳುನಾಡಿನ ಪ್ರಕಾಶ್(35) ಮೃತರು. ಪ್ರಕಾಶ್ ಪತ್ನಿ ಮಹದೇವಿ ಅವರ ಎರಡೂ ಕಾಲು ಮುರಿದಿದ್ದು, ದಂಪತಿಯ ಪುಟ್ಟ ಮಗು ಅಕುಲ್‌ನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ತಮಿಳುನಾಡು ಮೂಲದ ಪ್ರಕಾಶ್ ಗೋವಿಂದಶೆಟ್ಟಿ ಪಾಳ್ಯದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ರಾಯಕೋಟೆಯ ದೇವಾಲಯವೊಂದಕ್ಕೆ ತೆರಳಲು ಬೈಕ್‌ನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ಪ್ರಕಾಶ್ ತೆರಳಿದ್ದರು.
ಬೊಮ್ಮಸಂದ್ರದ ಬಳಿಯ ರಾಯಲ್ ಎನ್‌ಫೀಲ್ಡ್ ಷೋ ರೂಂ ಬಳಿ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಕೆಳಗುರುಳಿದ್ದಾರೆ. ಪ್ರಕಾಶ್ ಮತ್ತು ಮಹದೇವಿ ಅವರ ಮೇಲೆ ಲಾರಿ ಚಕ್ರ ಹರಿದು ಪ್ರಕಾಶ್ ಸ್ಥಳದಲ್ಲೇ ಮೃತಪಟ್ಟರೆ, ಮಹದೇವಿ ಎರಡೂ ಕಾಲು ಮುರಿದಿವೆ.
ಗಾಯಗೊಂಡಿದ್ದ ಮಗು ಮತ್ತು ತಾಯಿ ಮಹದೇವಿಯನ್ನು ನಾರಾಯಣ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಲಾರಿಯನ್ನು ಹೆಬ್ಬಗೋಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಯಿಯ ರಕ್ತಸಿಕ್ತ ಕಾಲುಗಳನ್ನು ನೋಡಿ ಮಗು ಅಕುಲ್ ಭಯದಿಂದ ರೋದಿಸುತ್ತಿದ್ದ ದೃಶ್ಯ ಮನಕಲಕುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.