ADVERTISEMENT

ಪ್ರಖರತೆ ಬಿಸಿಲು | ಬೆಂಕಿ ನಿಯಂತ್ರಣಕ್ಕೆ ಕ್ರಮ ಅಗತ್ಯ

ಮರಗಳ ರಕ್ಷಣೆಗೂ ಅರಣ್ಯ ಇಲಾಖೆ ಮುಂದಾಗಲಿ: ಪರಿಸರವಾದಿಗಳು

ನಟರಾಜ ನಾಗಸಂದ್ರ
Published 30 ಜನವರಿ 2023, 4:50 IST
Last Updated 30 ಜನವರಿ 2023, 4:50 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಗಡಿ ಭಾಗದ ಕೊರಟಗೇರೆ ರಸ್ತೆ ಅರಣ್ಯದ ಅಂಚಿನಲ್ಲಿ ಭಾನುವಾರ ಕಾಣಿಸಿಕೊಂಡಿದ್ದ ಬೆಂಕಿ
ದೊಡ್ಡಬಳ್ಳಾಪುರ ತಾಲ್ಲೂಕಿನ ಗಡಿ ಭಾಗದ ಕೊರಟಗೇರೆ ರಸ್ತೆ ಅರಣ್ಯದ ಅಂಚಿನಲ್ಲಿ ಭಾನುವಾರ ಕಾಣಿಸಿಕೊಂಡಿದ್ದ ಬೆಂಕಿ   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಡಿಸೆಂಬರ್‌ ತಿಂಗಳ ಚಳಿಯ ಜತೆಗೆ ಪ್ರಾರಂಭವಾದ ಬಿಸಿಲು ರಥಸಪ್ತಮಿ ನಂತರ ತನ್ನ ಪ್ರಖರತೆಯನ್ನು ತೀವ್ರಗೊಳಿಸಿಕೊಂಡಿದೆ. ಇದರಿಂದ ತಾಲ್ಲೂಕಿನ ಬೆಟ್ಟದ ಸಾಲು, ಕಿರು ಅರಣ್ಯಗಳನ್ನು ಬೆಂಕಿಯಿಂದ ರಕ್ಷಿಸುವ ಕೆಲಸ ಚುರುಕಾಗಬೇಕಿದೆ ಎನ್ನುವ ಕೂಗು ಪರಿಸರ ಪ್ರಿಯರಿಂದ ಕೇಳಿಬಂದಿದೆ.

ಈ ಬಾರಿ ಮಳೆಗಾಲ ಹೆಚ್ಚಿನ ಪ್ರಮಾಣದಲ್ಲಿ ಆಗಿರುವ ಹಿನ್ನೆಲೆಯಲ್ಲಿ ಕುರುಚಲು ಅರಣ್ಯ, ಬೆಟ್ಟದ ತಪ್ಪಲುಗಳ ನಡುವೆ ಹಾದು ಹೋಗಿರುವ ರಸ್ತೆಗಳ ಬದಿ ಹಾಗೂ ಬೆಟ್ಟ ಗುಡ್ಡಗಳಲ್ಲಿ ಹುಲ್ಲು ಯಥೇಚ್ಛವಾಗಿ ಬೆಳೆದು ನಿಂತಿದೆ. ಮಾಕಳಿ, ಉಜ್ಜನಿ ಬೆಟ್ಟದ ಸಾಲು ಪ್ರತಿ ವರ್ಷವು ಹೆಚ್ಚಾಗಿ ಬೆಂಕಿಗೆ ಆಹುತಿಯಾಗುತ್ತಲೇ ಬಂದಿದೆ. ಹೀಗಾಗಿಯೇ ಈ ಬೆಟ್ಟದ ಸಾಲುಗಳಲ್ಲಿ ಬೃಹತ್‌ ಗಾತ್ರದ ಮರಗಳು ಬೆಳೆಯಲು ಮಣ್ಣು, ನೀರು ಸೇರಿದಂತೆ ಪೂರಕ ಪರಿಸರ ಇದ್ದರೂ ಯಾವುದೇ ಜಾತಿಯ ಮರಗಳು ಬೆಳೆದಿಲ್ಲ. ಇಡೀ ಬೆಟ್ಟದ ಸಾಲಿನಲ್ಲಿ ಸುತ್ತಾಡಿದರೂ ಕುರುಚಲು ಕಾಡಿನಲ್ಲಿ ಕಂಡು ಬರುವ ಸಣ್ಣ ಪುಟ್ಟ ಗಿಡಗಳನ್ನು ಮಾತ್ರ ಕಾಣುವಂತಾಗಿದೆ.

ಜನವರಿ ಪ್ರಾರಂಭವಾಗುತ್ತಿದ್ದಂತೆ ಮಾಕಳಿ, ಉಜ್ಜನಿ, ಪಂಚಗರಿ ಬೆಟ್ಟದ ಸಾಲುಗಳಿಗೆ ಸೌದೆ, ಸಣ್ಣ ಪುಟ್ಟ ಪ್ರಾಣಿಗಳ ಬೇಟೆ ಸೇರಿದಂತೆ ಇತರೆ ಉದ್ದೇಶಗಳಿಂದಾಗಿ ಕಿಡಿಗೇಡಿಗಳು ಬೆಂಕಿ ಹಾಕುತ್ತಾರೆ. ಆದರೆ ಇದುವರೆಗೂ ಒಂದು ವರ್ಷವು ಸಹ ಬೆಟ್ಟದ ಸಾಲಿಗೆ ಬೆಂಕಿ ಬೀಳದಂತೆ ಅರಣ್ಯ ಇಲಾಖೆ ತಡೆದಿರುವ ನಿದರ್ಶನ ಮಾತ್ರ ಇಲ್ಲ ಎಂದು ಪರಿಸರವಾದಿಗಳು ದೂರಿದ್ದಾರೆ. ಜತೆಗೆ ಅರಣ್ಯ ಇಲಾಖೆ ಸಸಿಗಳನ್ನು ನೆಡುವುದಕ್ಕೆ ಮಾತ್ರ ಸೀಮಿತವಾಗಿದೆಯೇ ವಿನಃ ಬೆಳೆದಿರುವ ಸಸಿಗಳನ್ನು ಬೆಂಕಿಯಿಂದ ರಕ್ಷಿಸುವ ಕಡೆಗೆ ಅಷ್ಟಾಗಿ ಪ್ರಾಮುಖ್ಯತೆಯನ್ನೇ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

ಮಳೆಗಾಲ ಮುಕ್ತಾಯವಾಗಿ ಬಿಸಿಲು ಪ್ರಾರಂಭವಾಗುತ್ತಿದ್ದಂತೆ ಬೆಟ್ಟದ ಸಾಲಿನ ರಸ್ತೆಗಳ ಬದಿಯಲ್ಲಿ ಒಣಗಿ ನಿಂತ ಹುಲ್ಲನ್ನು ಯಂತ್ರಗಳ ಮೂಲಕ ಕತ್ತರಿಸಿ ಅರಣ್ಯ ಇಲಾಖೆ ಸಿಬ್ಬಂದಿಯೇ ಬೆಂಕಿ ಹಾಕಿ ಸುಡಬೇಕು. ಈ ಮೂಲಕ ರಸ್ತೆ ಬದಿಯಿಂದ ಆಕಸ್ಮಿಕವಾಗಿ ಬೆಂಕಿ ಅರಣ್ಯ ಅಥವಾ ಬೆಟ್ಟದ ಕಡೆಗೆ ಹರಡದಂತೆ ಮುಂಜಾಗ್ರತೆ ವಹಿಸಬೇಕು.

ತಾಲ್ಲೂಕಿನ ಪ್ರಮುಖ ಬೆಟ್ಟದ ಸಾಲುಗಳಾದ ಮಾಕಳಿ, ಉಜ್ಜನಿ, ದೇವರಬೆಟ್ಟ, ಹುಲುಕುಡಿ ಬೆಟ್ಟ, ಜಾಲಿಗೆ ಬೆಟ್ಟದ ತಪ್ಪಲಿನಲ್ಲಿ ತಾತ್ಕಾಲಿಕವಾಗಿ ಬೆಂಕಿ ನಂದಿಸುವ ಹಾಗೂ ಬೆಂಕಿ ಕಾಣಿಸಿಕೊಂಡಾಗ ಮಾಹಿತಿ ನೀಡುವ ನಿಯಂತ್ರಣ ಕೊಠಡಿಗಳ ಟೆಂಟ್‌ಗಳನ್ನು ತೆರೆಯಬೇಕು. ಬೆಟ್ಟದ ತಪ್ಪಲಿನ ಹಾಗೂ ಕಿರು ಅರಣ್ಯ ಪ್ರದೇಶದ ಅಂಚಿನ ಗ್ರಾಮಗಳ ಜನರಲ್ಲಿ ಬೆಂಕಿಯಿಂದಾಗಿ ಅರಣ್ಯ ಹಾಗೂ ಸಣ್ಣ ಪುಟ್ಟ ಪ್ರಾಣಿಗಳ ನಾಶವಾಗುವ ಕುರಿತಂತೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದ್‌ ಹೇಳುತ್ತಾರೆ.

ಬೆಟ್ಟದಲ್ಲಿ ಹೆಚ್ಚುವರಿ ಗಸ್ತು ಅಗತ್ಯ
ಬೆಟ್ಟಕ್ಕೆ ಬೆಂಕಿ ಹಾಕುವುದು ಇಷ್ಟು ವರ್ಷಗಳ ಕಾಲ ಸೌದೆ ತಂದು ಮಾರಾಟ ಮಾಡುವ ಉದ್ದೇಶವಾಗಿತ್ತು. ಈಗ ಸೌದೆಯನ್ನು ಉಪಯೋಗಿಸಿ ಅಡುಗೆ ಮಾಡುವವರ ಸಂಖ್ಯೆ ಗ್ರಾಮೀಣ ಪ್ರದೇಶದಲ್ಲೂ ಅಪರೂಪ.

ಆದರೆ ಬೆಟ್ಟಕ್ಕೆ ಬೆಂಕಿ ಹಾಕುವ ಉದ್ದೇಶ ಬದಲಾಗಿದೆ. ಬೆಟ್ಟದ ತಪ್ಪಲಿನ ಭೂಮಿ ಒತ್ತುವರಿ, ಮಣ್ಣಿನ ಗಣಿಗಾರಿಕೆ ಸೇರಿದಂತೆ ಇತರೆ ಉದ್ದೇಶಗಳು ಮುಖ್ಯವಾಗುತ್ತಿವೆ. ಹೀಗಾಗಿ ಅರಣ್ಯ ಇಲಾಖೆ ಬೇಸಿಗೆ ಮುಕ್ತಾಯವಾಗುವವರೆಗೂ ಹೆಚ್ಚುವರಿಯಾಗಿ ಗಸ್ತು ಪ್ರಾರಂಭಿಸಬೇಕು. ಹಾಗೆಯೇ ಬೆಂಕಿ ಕಾಣಿಸಿಕೊಂಡಾಗ ಸಾರ್ವಜನಿಕರು ಮಾಹಿತಿ ನೀಡಲು ಅನುಕೂಲವಾಗುವಂತೆ ಬೆಟ್ಟದ ಸಾಲು ಹಾಗೂ ಕಿರು ಅರಣ್ಯಗಳ ಮೂಲಕ ಹಾದು ಹೋಗುವ ರಸ್ತೆಗಳ ಬದಿಗಳಲ್ಲಿ ಇಲಾಖೆ ಅಧಿಕಾರಿಗಳ ಅಥವಾ ಕಂಟ್ರೋಲ್‌ ರೋಂ ದೂರವಾಣಿ ಸಂಖ್ಯೆ ನಾಮಫಲಕ ಹಾಕಬೇಕು.
ರಾಮಾಂಜಿನೇಯ, ಮಾಕಳಿ ಗ್ರಾಮ ನಿವಾಸಿ

ಕೃತ್ಯದ ಹಿಂದೆ ಗಣಿಗಾರಿಕೆ ಶಂಕೆ
ರಸ್ತೆ ನಿರ್ಮಾಣ ಸೇರಿದಂತೆ ಇತರೆ ನಿರ್ಮಾಣ ಕಾಮಗಾರಿಗಳಿಗೆ ಜಲ್ಲಿ, ಎಂಸ್ಯಾಂಡ್‌ಗೆ(ಕಲ್ಲುಪುಡಿ) ಈಗ ಹಿಂದೆಂದೂ ಇಲ್ಲದಷ್ಟು ಬೇಡಿಕೆ ಬಂದಿದೆ. ಬೆಟ್ಟಕ್ಕೆ ಬೆಂಕಿ ಹಚ್ಚುವ ಮೂಲಕ ಬೆಟ್ಟದ ತಪ್ಪಲಿನಲ್ಲಿ ಕಿರು ಅರಣ್ಯ ಇಲ್ಲದಂತೆ ಮಾಡಿ ಕಲ್ಲು ಗಣಿಗಾರಿಕೆಯನ್ನು ವಿಸ್ತರಿಸಲು ಅನುಕೂಲ ಮಾಡಿಕೊಳ್ಳಲು ಆಕಸ್ಮಿಕ ನೆಪದಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಹೆಚ್ಚಾಗಿದೆ. ಇದಕ್ಕೆ ಅರಣ್ಯ ಇಲಾಖೆ ಕಡಿವಾಣ ಹಾಕಬೇಕಿದೆ.
–ಮನೋಜ್‌ಕುಮಾರ್‌, ಹಳೇಕೋಟೆ ಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.