ADVERTISEMENT

‘ರಾಜಕಾಲುವೆ ಅಭಿವೃದ್ಧಿಗೆ ಕ್ರಿಯಾ ಯೋಜನೆ’

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 15:44 IST
Last Updated 16 ನವೆಂಬರ್ 2019, 15:44 IST
ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ಹಾಗೂ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಶಿವಣ್ಣ ಭೂಮಿ ಪೂಜೆ ನೆರವೇರಿಸಿದರು
ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ಹಾಗೂ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಶಿವಣ್ಣ ಭೂಮಿ ಪೂಜೆ ನೆರವೇರಿಸಿದರು   

ಆನೇಕಲ್: ಗ್ರಾಮಗಳಲ್ಲಿ ರಾಜಕಾಲುವೆಗಳನ್ನು ತೆರವುಗೊಳಿಸಿ ದುರಸ್ತಿ ಮಾಡುವ ಮೂಲಕ ಕೆರೆಗಳ ನೀರಿನ ಮೂಲಗಳನ್ನು ಸುಗಮವಾಗಿ ಹರಿಯುವಂತೆ ಮಾಡುವ ಮೂಲಕ ಜಲಮೂಲಗಳನ್ನು ಸಂರಕ್ಷಿಸಬೇಕಾದ ಅವಶ್ಯಕತೆಯಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಅವರು ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಕಾಂಕ್ರಿಟ್‌ ರಸ್ತೆ ಕಾಮಗಾರಿ ಹಾಗೂ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಉತ್ತಮ ಮಳೆಯಾಗುತ್ತಿದ್ದರೂ ಕೆರೆಗಳು ತುಂಬುತ್ತಿಲ್ಲ. ಹಾಗಾಗಿ ರಾಜಕಾಲುವೆಗಳನ್ನು ತೆರವುಗೊಳಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂಬ ಉದ್ದೇಶದಿಂದ ಬಳ್ಳೂರು ಗ್ರಾಮದಿಂದ ಈರಯ್ಯನಕೆರೆಯವರೆಗೆ ಸುಮಾರು ₹70 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಬಳ್ಳೂರಿನಿಂದ ತಮಿಳುನಾಡಿನ ಸಿಪ್‌ಕಾಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ಹಾಳಾಗಿತ್ತು. ಬಳ್ಳೂರಿನಿಂದ ಸಿಪ್‌ಕಾಟ್‌ಗೆ ನೂರಾರು ಮಂದಿ ಕಾರ್ಮಿಕರು ಪ್ರತಿದಿನ ಸಂಚರಿಸುತ್ತಾರೆ. ಹಾಗಾಗಿ ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಿಪ್‌ಕಾಟ್‌ನಿಂದ ಬಳ್ಳೂರುವರೆಗೆ ₹80 ಲಕ್ಷ ವೆಚ್ಚದಲ್ಲಿ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ಬಳ್ಳೂರು ಮುನಿವೀರಪ್ಪ ಮಾತನಾಡಿ, ಬಳ್ಳೂರು ಗ್ರಾಮದಲ್ಲಿ ಐದು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದರಿಂದಾಗಿ ಎಲ್ಲ ರಸ್ತೆಗಳು ಡಾಂಬರೀಕರಣವಾಗಿವೆ. ಗ್ರಾಮಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎನ್‌.ಮಂಜುನಾಥ್‌ ರೆಡ್ಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ಕುಮಾರ್‌, ಕಾರ್ಯದರ್ಶಿ ಮಂಜುನಾಥ್‌ ರೆಡ್ಡಿ, ಮುಖಂಡರಾದ ವಿ.ಮಾರಪ್ಪ, ಬಳ್ಳೂರು ನಾರಾಯಣಸ್ವಾಮಿ, ಜಿ.ನಾರಾಯಣ ರೆಡ್ಡಿ, ಭದ್ರಾ ರೆಡ್ಡಿ, ಕೆಂಚಪ್ಪ, ಮಂಜುನಾಥ್, ಶ್ರೀನಿವಾಸ್‌ ರೆಡ್ಡಿ, ಬಳ್ಳೂರು ಮಧು, ವಸಂತ್‌, ಮುನಿಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.