ADVERTISEMENT

ಸರ್ಕಾರಿ ಜಾಗದಲ್ಲಿ ಸಸಿ ಬೆಳೆಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:26 IST
Last Updated 5 ಜೂನ್ 2019, 15:26 IST
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು   

ದೇವನಹಳ್ಳಿ: ‘ಎಲ್ಲ ಸರ್ಕಾರಿ ಜಾಗದಲ್ಲಿ ಕಡ್ಡಾಯವಾಗಿ ಸಸಿಗಳನ್ನು ನೆಟ್ಟು, ಪೋಷಿಸಿ ಪರಿಸರ ಸಂರಕ್ಷಣೆ ಮಾಡಬೇಕು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ತಾಲ್ಲೂಕು ಪಂಚಾಯಿತಿ ವತಿಯಿಂದ ನಡೆದ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಮರಗಳನ್ನು ಕಡಿಯುತ್ತಿರುವುದು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಾಪಮಾನ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಆಮ್ಲಜನಕವನ್ನು ಹಣಕೊಟ್ಟು ಖರೀದಿಸುವ ಪರಿಸ್ಥಿತಿ ನಿಮಾರ್ಣವಾಗುತ್ತದೆ. ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಗಿಡ ಮರಗಳನ್ನು ಬೆಳೆಸುವಂತೆ ತಿಳಿಸಲಾಗುವುದು. ಅಂತರ್ಜಲ ಮಟ್ಟ 1200 ಅಡಿ ಆಳಕ್ಕೆ ಕುಸಿದಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ವತಿಯಿಂದ, ಯಾವುದೇ ಬಡಾವಣೆ ನಿರ್ಮಾಣ ಮಾಡಿದರೆ, ಉದ್ಯಾನದ ಜಾಗದಲ್ಲಿ ಸಸಿಗಳನ್ನು ನೆಟ್ಟು, ಮಕ್ಕಳಿಗೆ ಆಟವಾಡಲು ಅವಕಾಶ ಕಲ್ಪಿಸುವುದು ಕಡ್ಡಾಯ ಎಂದು ಬಡಾವಣೆ ಮಾಲೀಕರಿಗೆ ಸೂಚಿಸಬೇಕು’ ಎಂದರು.

ADVERTISEMENT

‘ಬರ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿದೆ. ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಜಾಗತಿಕ ತಾಪಮಾನದ ಹೆಚ್ಚಳ, ಇಳಿಮುಖವಾಗುತ್ತಿರುವ ಮಳೆ, ಪರಿಸರ ಮಾಲಿನ್ಯ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತಿದೆ. ಹಲವಾರು ಜೀವ ಸಂಕುಲಗಳಿಗೆ ಆವಾಸ ಸ್ಥಾನವಾಗಿರುವ ಪರಿಸರವನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮುರುಡಯ್ಯ ಮಾತನಾಡಿ ‘ಪರಿಸರ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ಪರಿಸರದ ಉಳಿವಿನಿಂದ ಮಾತ್ರ ಮನುಕುಲ ಉಳಿಯುತ್ತದೆ ಎಂದು ಅರಿಯಬೇಕು. ಗಿಡ–ಮರಗಳನ್ನು ದೇವರೆಂದು ತಿಳಿದು ಪೂಜಿಸಿ ಆರಾಧಿಸುತ್ತಾ ಬರುತ್ತಿರುವ ಪರಂಪರೆ ನಮ್ಮದು’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪ್ರದೀಪ್, ಸಾಮಾಜಿಕ ಅರಣ್ಯ ಇಲಾಖೆ ವಲಯ ಅಧಿಕಾರಿ ಪುಷ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.