ಹೊಸಕೋಟೆ: ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದಲ್ಲಿ ಸಾಕಷ್ಟು ತಪ್ಪುಗಳಿವೆ. ಅವುಗಳನ್ನು ಸರಿಪಡಿಸುವ ಅನಿವಾರ್ಯತೆ ಇದೆ. ಮನುಷ್ಯನಿಗೆ ತಾಂತ್ರಿಕತೆಯೊಂದಿದ್ದರೆ ಸಾಲದು ತಾತ್ವಿಕತೆಯನ್ನು ಅರ್ಥ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಬರುಗೂರು ರಾಮಚಂದ್ರಪ್ಪ ಹೇಳಿದರು.
ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಐಕ್ಯೂಎಸಿ, ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ ರೆಡ್ ಕ್ರಾಸ್, ರೋವರ್ಸ್- ರೆಂಜರ್ ಘಟಕ ಮತ್ತು ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಇಂದು ನಾವೆಲ್ಲ ತಂತ್ರಜ್ಞಾನದ ಹಿಂದೆ ಓಡುತ್ತಿದ್ದೇವೆ. ಆದರೆ ಅದರ ವಿರೋಧಿ ನಾನಲ್ಲ. ತಂತ್ರಜ್ಞಾನದ ಆವಿಷ್ಕಾರ ಇಂದು ನೆನ್ನೆಯದಲ್ಲ ಮನುಷ್ಯ ಬೆಂಕಿಯನ್ನು ಆವಿಷ್ಕರಿಸುವ ಪೂರ್ವದಲ್ಲೇ ಹುಟ್ಟಿಕೊಂಡಿದೆ. ಮನುಷ್ಯತ್ವ ಮತ್ತು ಜಗತ್ತಿಗೆ ಜ್ಞಾನದ ದಿಗಂತವನ್ನು ಪರಿಚಯಿಸಿದ್ದು ಬುದ್ಧ ಎಂದು ಹೆಮ್ಮೆಯಿಂದ ಒಪ್ಪಿಕೊಳ್ಳುತ್ತೇವೆ. ಆದರೆ ಬುದ್ಧನನ್ನು ಬಿಟ್ಟು ಕೃತಿಕಬುದ್ದಿ ಮತ್ತೆ (ಎಐ) ನಂತಹ ತಂತ್ರಜ್ಞಾನದ ಹಿಂದೆ ಹೋಗುತ್ತಿದ್ದೇವೆ ಅದೇ ದುರಂತ’ ಎಂದರು.
ಪ್ರತಿನಿತ್ಯ ದೇಶದಲ್ಲಿ ಧಾರ್ಮಿಕ ತಲ್ಲಣಗಳ ವಿಷಬೀಜಗಳನ್ನು ಬಿತ್ತಲಾಗುತ್ತಿದೆ. ಅಂತಹ ಸಂದರ್ಭದಲ್ಲಿ ಮಾನವಿಕ ವಿಜ್ಞಾನಗಳ ಗಂಧಗಾಳಿ ಇಲ್ಲದಂತೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಬೆಳೆಸಿದರೆ ಅವರಲ್ಲಿ ಸಾಂಸ್ಕೃತಿಕ ಸಾಮರಸ್ಯ ಹೇಗೆ ಮೂಡುತ್ತದೆ. ಮಕ್ಕಳಲ್ಲಿ ಜಾತ್ಯತೀತ ದೇಶ ಕಟ್ಟುವಂತಹ ಜ್ಞಾನ ಮತ್ತು ಶಿಸ್ತು ಬೆಳಸಬೇಕಿದೆ ಎಂದು ಹೇಳಿದರು.
ರಾಂಪ್ರಸಾದ್ ಬಿಸ್ಮಿಲಾ ಮತ್ತು ಆಶಫುಲ್ಲಾಖಾನ್ ಬೇರೆ ಬೇರೆ ಧರ್ಮದವರಾದರೂ ಇಬ್ಬರೂ ಅಪ್ಪಟ ದೇಶಭಕ್ತರೂ ಸೋದರರಂತೆ ಕಡೆವರೆಗೂ ಬದುಕಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ಮಾಡಿದರು. ಒಂದೇ ದಿನ ಇಬ್ಬರು ಓಟ್ಟಿಗೆ ನಗುತ್ತಾ ಗಲ್ಲಿಗೇರಿದರು. ಇಂತಹ ನಿಜವಾದ ಸೋದರತ್ವದ ಶಿಕ್ಷಣ ಮಕ್ಕಳಿಗೆ ಸಿಗಬೇಕಿದೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಯಲ್ಲಿ ಕೇವಲ ಶೇ 5ರಷ್ಟು ಜನರು ಮಾತ್ರ ಮಾನವಿಕ ವಿಜ್ಞಾನಗಳಾದ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರದ ತರಬೇತಿ ಬೇಕು ಎಂದು ಕೇಳುತ್ತಿರುವುದನ್ನು ಗಮನಿಸಿದರೆ ಸಮಾಜ ಎತ್ತ ಸಾಗುತ್ತಿದೆ ಎಂಬುದು ಅರ್ಥವಾಗುತ್ತದೆ ಎಂದರು.
‘ಸಭೆ ಸಮಾರಂಭ, ಶಾಲಾ–ಕಾಲೇಜುಗಳಲ್ಲಿ ಸಂವಿಧಾನದ ಪೂರ್ವ ಪೀಠಿಕೆ ಪಠಿಸಿದರೆ ಸಂವಿಧಾನಕ್ಕೆ ಗೌರವ ಸಲ್ಲಿಸಿದಂತೆ ಎಂಬ ಭಾವನೆ ಈಗಿನ ಕಾಲದಲ್ಲಿ ಮೂಡಿದೆ. ನೈಜವಾಗಿ ಪ್ರತಿಯೊಬ್ಬರೂ ಎಷ್ಟರ ಮಟ್ಟಿಗೆ ನಾವು ಸಂವಿಧಾನಕ್ಕೆ ಬದ್ಧರಾಗಿದ್ದೇವೆ ಎಂಬುದನ್ನು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರೆ ತಮಗೆ ಅರ್ಥವಾಗುತ್ತದೆ’ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಪ್ರೊ.ರಾಮಲಿಂಗಪ್ಪ ಟಿ ಬೇಗೂರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುರೇಶ್, ಮುನೇಗೌಡ, ಅಖಿಲ್ ಅಹಮದ್ ಮತ್ತು ವಕೀಲರಾದ ಸುಬ್ರಮಣಿ, ಉಪನ್ಯಾಸರಾದ ವಿಶ್ವೇಶ್ವರಯ್ಯ, ರವಿ, ಮಂಜುಳ, ಗಾಯಿತ್ರಮ್ಮ, ಮಂಜುನಾಥ್, ಶ್ರೀನಿವಾಸಚಾರಿ, ಶ್ರೀನಿವಾಸಪ್ಪ, ಸಾಧಿಕ್, ಮುನಿರಾಜು ಇತರರು ಉಪಸ್ಥಿತರಿದ್ದರು.
ಬದಲಾಗದ ಪುರುಷ ಪ್ರಧಾನ ಸಮಾಜ
‘ಹೆಣ್ಣು ನಾಲ್ಕು ಗೋಡೆಗಳಿಗೆ ಸೀಮಿತಳಲ್ಲ. ಅವಳಿಗೂ ಬದುಕಿದೆ ಶಿಕ್ಷಣ ಪಡೆಯುವ ಹಕ್ಕಿದೆ ಎಂದು ಸಾವಿತ್ರಿ ಬಾಯಿಪುಲೆ ಪುರುಷಶಾಹಿ ಸಮಾಜದ ವಿರುದ್ಧ ಹೋರಾಟ ನಡೆಸಿದರು. ಫಾತಿಮಾ ಶೇಕ್ ಮನೆ ಮನೆಗೆ ತೆರಳಿ ಹೆಣ್ಣುಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದರು. ಆದರೆ ಇಂದು ಮಹಿಳೆಗೆ ದೇಶದಲ್ಲಿ 2ನೇ ದರ್ಜೆ ಸ್ಥಾನಮಾನ ನೀಡಲಾಗಿದೆ. ದೇಶದಲ್ಲಿ ಇಂದು ದಿನಕ್ಕೆ 86 ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದರೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ’ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.