
ದೇವನಹಳ್ಳಿ: ವಿಮಾನ ನಿಲ್ದಾಣದಲ್ಲಿ ಟಾಕ್ಸಿ ನಿಲುಗಡೆ ಸಂಬಂಧ ಜಾರಿಗೊಳಿಸಿರುವ ಹೊಸ ನಿಯಮವನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕೆಂದು ಸಂಸದ ಡಾ.ಕೆ. ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿಗೊಂಡಿರುವ ಹೊಸ ಪಾರ್ಕಿಂಗ್ ನಿಯಮದಿಂದ ಖಾಸಗಿ ಟ್ಯಾಕ್ಸಿ ಚಾಲಕರು ಎದುರಿಸುತ್ತಿರುವ ಸಮಸ್ಯೆ ಕುರಿತು, ಹಳೆಯ ವ್ಯವಸ್ಥೆಗೆ ಮರು ಜಾರಿ ಸಾಧ್ಯತೆ, ಇನ್ನಿತರ ಪರ್ಯಾಯ ಕ್ರಮಗಳ ಬಗ್ಗೆ ಅವರು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಂಗಳವಾರ ವಿಮಾನ ನಿಲ್ದಾಣದಲ್ಲಿ ಸಭೆ ನಡೆಸಿದರು.
ಖಾಸಗಿ ಟ್ಯಾಕ್ಸಿ ಚಾಲಕರ ಸಂಘದ ಮನವಿಯ ಮೇರೆಗೆ ನಡೆದ ಸಭೆಯಲ್ಲಿ, ಹೊಸ ವ್ಯವಸ್ಥೆಯಂತೆ ಖಾಸಗಿ ಟ್ಯಾಕ್ಸಿಗಳಿಗೆ ಸುಮಾರು 500 ಮೀಟರ್ ದೂರದಲ್ಲಿ ನಿಲುಗಡೆ ನಿಗದಿಪಡಿಸಿರುವುದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದೆ ಎಂಬ ಅಂಶವನ್ನು ಪ್ರಾಧಿಕಾರದ ಗಮನಕ್ಕೆ ಸುಧಾಕರ್ ತಂದರು.
ವಿಮಾನದಿಂದ ಇಳಿಯುವ ಪ್ರಯಾಣಿಕರು, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಲಗೇಜ್ ಹೊಂದಿರುವವರು ದೂರ ನಡೆದು ಟ್ಯಾಕ್ಸಿ ಹತ್ತಬೇಕಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಜಾರಿಗೆ ತಂದಿರುವ ಹೊಸ ನಿಯಮವನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೆಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಡಾ.ಕೆ.ಸುಧಾಕರ್, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ 18ರಿಂದ 20 ಸಾವಿರ ಯುವಕರು ಖಾಸಗಿ ಟ್ಯಾಕ್ಸಿ ಮೇಲೆ ಅವಲಂಬಿಸಿದ್ದಾರೆ. ಇದನ್ನೇ ನಂಬಿಕೊಂಡು ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಜೀವನ ನಿರ್ವಹಿಸುತ್ತಿವೆ. ಕಳೆದ 15–20 ವರ್ಷಗಳಿಂದ ಸ್ಥಳೀಯ ಖಾಸಗಿ ಟ್ಯಾಕ್ಸಿ ಚಾಲಕರು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದು, ಅವರನ್ನು ಏಕಾಏಕಿ ದೂರವಿಡುವುದು ಸಮಂಜಸವಲ್ಲ ಎಂಬ ಹೇಳಿದರು.
‘ಖಾಸಗಿ ಟ್ಯಾಕ್ಸಿ ಚಾಲಕರ ಸಮಸ್ಯೆಯನ್ನು ಪ್ರಾಧಿಕಾರದ ಗಮನಕ್ಕೆ ತಂದಿದ್ದೇನೆ. ಬಿಐಎಎಲ್ ಪ್ರಾಧಿಕಾರವೂ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳುಬೇಕು. ಈ ಸಂಬಂಧ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಅಗತ್ಯವಿದ್ದರೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರಿಗೂ ವಿಷಯ ತಿಳಿಸಲಾಗುವುದು’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎ.ಬಿ.ಬಸವರಾಜ್, ಡಿಸಿಪಿ ಜಿ.ಕೆ. ಮಿಥುನ್ ಕುಮಾರ್, ಪೂರ್ವ ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಿ, ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯರಿಗೆ ಅವಕಾಶ ನೀಡಿ
ಪಾರ್ಕಿಂಗ್ ದಟ್ಟಣೆ ನಿಯಂತ್ರಣದ ನೆಪದಲ್ಲಿ ಖಾಸಗಿ ಟ್ಯಾಕ್ಸಿಗಳಿಗೆ ನಿರ್ಬಂಧ ವಿಧಿಸುವ ಬದಲು ಕನಿಷ್ಠ ಬಳಕೆದಾರ ಶುಲ್ಕ ವಿಧಿಸಿ ನಿಯಂತ್ರಿತವಾಗಿ ಪಾರ್ಕಿಂಗ್ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಬೇಕು. ಅಗ್ರಿಗೇಟರ್‌ಗಳೊಂದಿಗೆ ಸ್ಥಳೀಯ ಚಾಲಕರಿಗೂ ಸಮಾನ ಅವಕಾಶ ಇರಬೇಕು. ಯಾವ ಸೇವೆ ಬೇಕೆಂಬುದನ್ನು ಪ್ರಯಾಣಿಕರೇ ನಿರ್ಧರಿಸಬೇಕು ಡಾ.ಕೆ.ಸುಧಾಕರ್ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.