ADVERTISEMENT

ಮಂಡಿಬೆಲೆ ಗ್ರಾ.ಪಂ ಅಧ್ಯಕ್ಷೆಯಾಗಿ ಅಂಬಿಕಾ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 8:46 IST
Last Updated 4 ಫೆಬ್ರುವರಿ 2021, 8:46 IST
ವಿಜಯಪುರ ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಂಬಿಕಾ ಮತ್ತು ಉಪಾಧ್ಯಕ್ಷ ಕೇಶವ ಅವರನ್ನು ಜೆಡಿಎಸ್ ಮುಖಂಡರು ಅಭಿನಂದಿಸಿದರು
ವಿಜಯಪುರ ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಂಬಿಕಾ ಮತ್ತು ಉಪಾಧ್ಯಕ್ಷ ಕೇಶವ ಅವರನ್ನು ಜೆಡಿಎಸ್ ಮುಖಂಡರು ಅಭಿನಂದಿಸಿದರು   

ವಿಜಯಪುರ: ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ನೂತನ ಅಧ್ಯಕ್ಷೆಯಾಗಿ ಅಂಬಿಕಾ ಮತ್ತು ಉಪಾಧ್ಯಕ್ಷರಾಗಿ ಕೇಶವ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಚಿಕ್ಕತತ್ತಮಂಗಲ ಗ್ರಾಮದ ಸದಸ್ಯೆ ಅಂಬಿಕಾ ಹಾಗೂ ದೊಡ್ಡತತ್ತಮಂಗಲ ಗ್ರಾಮದ ಸದಸ್ಯೆ ಮಂಜುಳಮ್ಮ ನಾಮಪತ್ರ ಸಲ್ಲಿಸಿದ್ದರು. ಮಂಜುಳಮ್ಮ ನಾಮಪತ್ರ ವಾಪಸ್ ಪಡೆದಿದ್ದರಿಂದ ಅಧ್ಯಕ್ಷೆಯಾಗಿ ಅಂಬಿಕಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕೇಶವ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂಗ್ರಾಮ್‌ ಅಲಬುರ್ಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಸದಸ್ಯೆಯಾಗಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಅಂಬಿಕಾ ಅವರು, ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರೊಂದಿಗೆ ಬಂದು ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದರು. ಕಳೆದ ಹತ್ತು ದಿನಗಳಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ADVERTISEMENT

ಪ್ರಯತ್ನ ವಿಫಲ: ಅಂಬಿಕಾ ಅವರು ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾಗಿದ್ದರಿಂದ ಆ ಪಕ್ಷದ ಮುಖಂಡರು ಸದಸ್ಯೆಯ ಸಂಬಂಧಿಕರೊಟ್ಟಿಗೆ ನಡೆಸಿದ ಮಾತುಕತೆ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಕೊನೆಯವರೆಗೂ ನಡೆಸಿದ ಪ್ರಯತ್ನ ವಿಫಲವಾದ ಕಾರಣ ದೊಡ್ಡತತ್ತಮಂಗಲ ಗ್ರಾಮದ ಸದಸ್ಯೆಯಿಂದ ನಾಮಪತ್ರ ಸಲ್ಲಿಕೆ ಮಾಡಿಸಿದರಾದರೂ ಪುನಃ ವಾಪಸ್ ಪಡೆದುಕೊಂಡರು. ಪಂಚಾಯಿತಿ ಆವರಣದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಶಾಸಕ ನಿಸರ್ಗ ನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಪುರಸಭಾ ಸದಸ್ಯ ರವೀಂದ್ರ, ಕಾರಹಳ್ಳಿ ಮುನೇಗೌಡ, ಕೋರಮಂಗಲ ಎಂ. ವೀರಪ್ಪ, ಕಲ್ಯಾಣ್ ಕುಮಾರ್ ಬಾಬು, ಬಸವರಾಜ್, ರೈತ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಧರ್ಮಪುರದ ವಕೀಲ ಮುನಿಯಪ್ಪ, ಗಡ್ಡದನಾಯಕನಹಳ್ಳಿ ಚಂದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.