ಆನೇಕಲ್ : ಕಂದಾಯ ಮತ್ತು ಪೊಲೀಸ್ ಇಲಾಖೆ ಬೇಜಾವಾಬ್ದಾರಿತನ ಆಡಳಿತ ಹಾಗೂ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ ದಲಿತ ಮತ್ತು ಪ್ರಗತಿಪರ ಹೋರಾಟ ಸಮಿತಿಯಿಂದ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.
ದಲಿತ ಸಂಘರ್ಷ ಸಮಿತಿ, ಭಾರತೀಯ ಭೀಮ ಸೇವೆ, ದಲಿತ ಸಂಘರ್ಷ ಸಮಿತಿ, ಬಿ.ಆರ್.ಅಂಬೇಡ್ಕರ್ ಪ್ರತಿಷ್ಠಾನ, ಕರ್ನಾಟಕ ಭೋವಿ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ಎಎಸ್‌ಬಿ ಮೈದಾನದಿಂದ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿಯಲ್ಲಿ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಮತ್ತು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಭಾರತೀಯ ಭೀಮಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬ್ಯಾಟರಾಜು ಮಾತನಾಡಿ, ಆನೇಕಲ್ ತಾಲ್ಲೂಕಿನ ಪಂಚಾಯಿತಿಯಿಂದ ತಾಲ್ಲೂಕು ಕಚೇರಿಯವರೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಡವರ ಕೆಲಸಗಳು ಮಾಡಿಸಿಕೊಳ್ಳಲು ಪರದಾಡುವಂತಾಗಿದೆ. ತಾಲ್ಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ಹಣವಂತರ ಕೆಲಸಗಳು ಮಾತ್ರ ಸುಗಮವಾಗಿ ನಡೆಯುತ್ತಿದೆ ಎಂದು ದೂರಿದರು.
ರಿಯಲ್ ಎಸ್ಟೇಟ್ ಮತ್ತು ಡೆವಲಪರ್‌ಗಳ ಕೆಲಸಗಳಿಗೆ ನೀಡಿದಷ್ಟೇ ಮಹತ್ವವನ್ನು ತಾಲ್ಲೂಕು ಕಚೇರಿಯ ಸಿಬ್ಬಂದಿ ಬಡವರು, ರೈತರು, ದಲಿತರ ಕೆಲಸಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.
ದಲಿತ ಮತ್ತು ಪ್ರಗತಿಪರ ಒಕ್ಕೂಟಗಳ ಸಂಘವು ಒಗ್ಗೂಡಿ ವಿವಿಧ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಈ ಬೇಡಿಕೆಗಳು ಈಡೇರದಿದ್ದರೆ ತಾಲ್ಲೂಕು ಬಂದ್ ಮಾಡುವ ಮೂಲಕ ಸಂಘಟನೆಗಳು ಬಲಪ್ರದರ್ಶನ ನಡೆಸಲಿದೆ. ದಲಿತರ ಮೇಲಿನ ದೌರ್ಜನ್ಯಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಗೌತಮ್ ವೆಂಕಿ ಮಾತನಾಡಿ, ತಾಲ್ಲೂಕಿನ ಹಲವು ವರ್ಷಗಳಿಂದ ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರಗಳನ್ನು ನೀಡಿಲ್ಲ. ಬಡವರಿಗೆ ಹಕ್ಕುಪತ್ರಗಳನ್ನು ನೀಡುವುದರಿಂದ ಭದ್ರತೆ ದೊರೆಯುತ್ತದೆ. ಬಿಬಿಎಂಪಿ 18 ಕಿ.ಮೀ. ವ್ಯಾಪ್ತಿಯಲ್ಲಿ ಹಕ್ಕುಪತ್ರ ನೀಡುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಇದರಿಂದಾಗಿ ತಾಲ್ಲೂಕಿನ ಹಲವು ಬಡ ಕುಟುಂಬಗಳಿಗೆ ಹಕ್ಕುಪತ್ರ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೈಗಾರಿಕ ಪ್ರದೇಶಗಳಿದ್ದರೂ ಸ್ಥಳೀಯರಿಗೆ ಉದ್ಯೋಗಗಳು ದೊರೆಯುತ್ತಿಲ್ಲ. ವಿದ್ಯಾವಂತ ಸಮಾಜ ಉದ್ಯೋಗಕ್ಕಾಗಿ ಗುಳೆ ಹೋಗುವಂತಾಗಿದೆ. ಆನೇಕಲ್ ಪಟ್ಟಣದ ನಾರಾಯಣಪುರದಲ್ಲಿ ಹಲವು ವರ್ಷಗಳಿಂದ ಬಡವರು ವಾಸವಾಗಿದ್ದಾರೆ. ಹಾಗಾಗಿ ಇವರಿಗೆ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ವಕೀಲರಾದ ಆನಂದ್ ಚಕ್ರವರ್ತಿ, ಪುರುಷೋತ್ತಮ್, ಮುಖಂಡರಾದ ಸಕಲವಾರ ನಾರಾಯಣ್, ಅರೇಹಳ್ಳಿ ಅಶ್ವಥ್, ಕ್ರಾಂತಿ ಗೋವಿಂದ್, ಗೂಳಿಮಂಗಲ ನಾಗಪ್ಪ, ಮುನಿರಾಜು, ಸಂಪಿಗೆ ನಾಗರಾಜು, ಜಾಲಿ ವೆಂಕಟೇಶ್, ಪ್ರದೀಪ್ ಚಾಲುಕ್ಯ, ಎಸ್.ಉಮೇಶ್, ಶಶಿಕುಮಾರ್, ಇಂಡ್ಲವಾಡಿ ಮಹದೇವ್ ಇದ್ದರು.
ತಿಂಗಳಿಗೊಮ್ಮ ಪರಿಶಿಷ್ಟರ ಸಭೆ ನಡೆಸಿ ಆನೇಕಲ್ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಬೇಕು. ತಾಲ್ಲೂಕಿನ ದಂಡಾಧಿಕಕಾರಿಗಳು ತಿಂಗಳಿಗೊಮ್ಮೆ ದಲಿತರ ಸಭೆ ಕರೆದು ಅಹವಾಲು ಆಲಿಸಬೇಕು. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾಯ್ದೆಯಡಿಯಲ್ಲಿ ದೂರು ದಾಖಲಾದ ತಕ್ಷಣ ತಪ್ಪಿತಸ್ಥರನ್ನು ಬಂದಿಸಬೇಕು. ತಾಲ್ಲೂಕಿನಲ್ಲಿ ಬಾಕಿ ಉಳಿದಿರುವ ಪಿಟಿಸಿಎಲ್ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂದು ಪ್ರತಿಭಟನನಿರತರು ಒತ್ತಾಯಿಸಿದರು ಹೆರಿಗೆ ಆಸ್ಪತ್ರೆ ನಿರ್ಮಿಸಿ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಬೇಕು. ಇದರಿಂದಾಗಿ ಈ ಭಾಗದ ಮಹಿಳೆಯರಿಗೆ ಅನುಕೂಲವಾಗಲಿದೆ. ತಾಲ್ಲೂಕಿನ ಹಲವಾರು ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಹಾಗಾಗಿ ಒತ್ತುವರಿ ತೆರವುಗೊಳಿಸಿ ಜಲಮೂಲಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.