ಆನೇಕಲ್: ಪಟ್ಟಣದ ಥಳೀ ರಸ್ತೆಯಲ್ಲಿ ಭಜನೆ ಮಂದಿರದಲ್ಲಿ ವಹ್ನಿಕುಲ ಸೇವಾ ಸಂಘದಿಂದ ದ್ರೌಪದಮ್ಮ ದೇವಿ ಜಯಂತ್ಯುತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು. ದ್ರೌಪದಿ ದೇವಿ ಜಯಂತಿಯ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ಆಯೋಜಿಸಲಾಯಿತು.
ಥಳೀ ರಸ್ತೆಯಲ್ಲಿನ ಭಜನೆ ಮಂದಿರದಲ್ಲಿ ದ್ರೌಪದಮ್ಮ ದೇವಿ ಜಯಂತಿ ಪ್ರಯುಕ್ತ ಬೆಳಗಿನಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಯಂತ್ಯುತ್ಸವದ ಅಂಗವಾಗಿ ಭಜನೆ ಮನೆಯಲ್ಲಿ ವಿಶೇಷ ಪೂಜೆ, ಅಲಂಕಾರ ಏರ್ಪಡಿಸಲಾಗಿತ್ತು.
ದ್ರೌಪದಿ ದೇವಿ, ಧರ್ಮರಾಯ, ಅರ್ಜುನ, ಭೀಮ, ಕೃಷ್ಣ ದೇವರು ಉತ್ಸವ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ ದೇವರ ಮೆರವಣಿಗೆ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈಭವದ ಮೆರವಣಿಗೆ ನಡೆಯಿತು. ಭಜನೆ ಮನೆಯಿಂದ ಪ್ರಾರಂಭವಾದ ಮೆರವಣಿಗೆಯು ದೇವರಕೊಂಡಪ್ಪ ವೃತ್ತ, ಗಾಂಧಿ ವೃತ್ತದ ಮೂಲಕ ಸಾಗಿ ಭಜನೆ ಮನೆ ತಲುಪಿತು. ಮನೆ ಮನೆಗಳ ಬಳಿ ದೇವಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂದಿತು.
ಹೂವಿನ ಪಲ್ಲಕ್ಕಿಯಲ್ಲಿ ದೇವಿಯ ಮೂರ್ತಿ ಕೂರಿಸಲಾಗಿತ್ತು. ಆಕರ್ಷಕ ಪಲ್ಲಕ್ಕಿಗೆ ಭಕ್ತರು ಮಲ್ಲಿಗೆ ಹೂವು ಎಸೆದು ಭಕ್ತಿ ಸಮರ್ಪಿಸಿದರು. ಮನೆಗಳ ಮುಂದೆ ದೇವಿಗೆ ಪೂಜೆ ಸಲ್ಲಿಸಲಾಯಿತು. ದೇವಿಗೆ ಭಕ್ತರು ಮಡಿಲಕ್ಕಿ ಸಲ್ಲಿಸಿದರು. ಯುವಕರು ತಮಟೆಯ ಸದ್ದಿಗೆ ಹೆಜ್ಜೆ ಹಾಕಿ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಹಿಳೆಯರು ಪೂರ್ಣಕುಂಭ ಕಲಶಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಪೂಜಾರಿ ಚಂದ್ರಪ್ಪ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.
ಆನೇಕಲ್‌ನ ಧರ್ಮರಾಯ ದೇವಾಲಯ, ಮಾಯಸಂದ್ರದ ದ್ರೌಪದಮ್ಮ ದೇವಿ ದೇವಾಲಯದಲ್ಲೂ ಜಯಂತಿ ಆಚರಿಸಲಾಯಿತು. ಮಾಯಸಂದ್ರದಲ್ಲಿ ದೇವಿಗೆ ಕರಗದ ಅಲಂಕಾರ ಮಾಡಲಾಗಿತ್ತು. ವಿವಿಧ ಗ್ರಾಮಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.