
ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಕಳೆದ 200ಕ್ಕೂ ಹೆಚ್ಚು ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ರೈತರು ಮನವಿ ಸಲ್ಲಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ತಾಲ್ಲೂಕಿನ ಅತ್ತಿಬೆಲೆಗೆ ಭೇಟಿ ನೀಡಿದ್ದ ಅವರನ್ನು ರೈತರು ಭೇಟಿ ಮಾಡಿ ಹೋರಾಟದ ಬಗ್ಗೆ ವಿವವರಿಸಿದರು.
ಸರ್ಕಾರ ರೈತರು ಭೂಮಿ ಕಿತ್ತುಕೊಳ್ಳಲು ಕೆಐಎಡಿಬಿಯನ್ನು ಬಳಸುತ್ತಿದೆ. ರೈತರು ಸಂಘಟಿತರಾಗಿದ್ದು, ಪ್ರಾಣ ಕೊಡುತ್ತಾರೆ ಹೊರತು ಒಂದಿಂಚು ಭೂಮಿ ಕೊಡುವುದಿಲ್ಲ. ಫಲವತ್ತಾದ ಭೂಮಿಯನ್ನು ಅಧಿಕಾರಿಗಳು ಬಂಜರು ಭೂಮಿ ಎಂದು ವರದಿ ನೀಡಿದ್ದಾರೆ. ಹಾಗಾಗಿ ವಿರೋಧ ಪಕ್ಷದ ನಾಯಕರು ಈ ಬಗ್ಗೆ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಜಯಪ್ರಕಾಶ್ ಆಗ್ರಹಿಸಿದರು.
ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವವರೆಗೂ ಹೋರಾಟವನ್ನು ಮುಂದುವರೆಸಲಾಗುವುದು. ಹಾಗಾಗಿ ಆರ್.ಅಶೋಕ್ ಅವರು ಒಮ್ಮೆ ರೈತರ ಹೋರಾಟ ಸ್ಥಳಕ್ಕೆ ಭೇಟಿ ನೀಡಬೇಕು. ರೈತರ ಕೃಷಿ ಭೂಮಿಯ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆಯಬೇಕು ಎಂದು ಒತ್ತಾಯಿಸಿದರು.
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಮುಖಂಡರಾದ ಎಸ್.ಆರ್.ಟಿ.ಅಶೋಕ್ ರೆಡ್ಡಿ, ದೊಡ್ಡಹಾಗಡೆ ಶಂಕರ್, ಸಂಪಂಗಿರಾಮಯ್ಯ, ಮುನಿರಾಜು ಗೌಡ, ಉಮಾ ಪರಶುರಾಮ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.