ಆನೇಕಲ್: ತಾಲ್ಲೂಕಿನಾದ್ಯಂತ ಭಾನುವಾರ ಭಾರಿ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿತ್ತು.
ತಾಲ್ಲೂಕಿನಾದ್ಯಂತ ಕಳೆದ 10ದಿನಗಳಿಂದಲೂ ಸುರಿಯುತ್ತಿರುವ ಮಳೆ ಭಾನುವಾರ ಭಾರಿ ಪ್ರಮಾಣದಲ್ಲಿ ಸುರಿದಿದ್ದು, ರಸ್ತೆಗಳು ಕೆರೆಯಂತಾಗಿದ್ದವು.
ಭಾನುವಾರ ಮಧ್ಯಾಹ್ನ 1ರ ವೇಳೆಗೆ ಆರಂಭವಾದ ಮಳೆ ಸಂಜೆ 4ರವರೆಗೂ ಸುರಿಯಿತು. ಆನೇಕಲ್, ಚಂದಾಪುರ, ಬೊಮ್ಮಸಂದ್ರ, ಹೆಬ್ಬಗೋಡಿಗಳಲ್ಲಿ ಮಳೆಯಿಂದ ರಸ್ತೆಗಳು ಕೆರೆಯಂತಾಗಿತ್ತು. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲಾಗದೇ ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು.
ಚಂದಾಪುರ-ಎಲೆಕ್ಟ್ರಾನಿಕ್‌ಸಿಟಿ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಪರದಾಡಿದರು. ಕಿತ್ತಗಾನಹಳ್ಳಿ ಗೇಟ್ ಬಳಿಯಲ್ಲಿ ರಸ್ತೆಯಲ್ಲಿ ನೀರು ಹರಿಯದೇ ಅಲ್ಲಿಯೇ ನಿಂತಿದ್ದರಿಂದ ಮೊಣಕಾಲುದ್ದ ನೀರು ನಿಂತಿತ್ತು. ದ್ವಿಚಕ್ರ ವಾಹನ ಚಲಾಯಿಸಲಾಗದೇ ಸವಾರರು ತಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.
ಬೊಮ್ಮಸಂದ್ರ ಮೆಟ್ರೊ ನಿಲ್ದಾಣದ ಹೊರಗಡೆ ಸಾರ್ವಜನಿಕರು ಪರದಾಡಿದರು. ವಾರಾಂತ್ಯವಾಗಿದ್ದರಿಂದ ಬೆಂಗಳೂರಿಗೆ ಹೋಗುವವರು ಮೆಟ್ರೊ ಬಳಸಿದ್ದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಮಳೆಯಿಂದ ಛತ್ರಿಗಳನ್ನು ಹಿಡಿದು ಬೊಮ್ಮಸಂದ್ರ ಬಳಿ ರಸ್ತೆ ದಾಟುತ್ತಿದ್ದ ದೃಶ್ಯಗಳು ಕಂಡು ಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.