
ಆನೇಕಲ್ ಪುರಸಭೆಯ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ, ಹಸಿರು ಮನೆ ಬೆಳೆಗಾರರ ಸಂಘದ ವತಿಯಿಂದ ಹೂ ಬೆಳೆ ಬೇಸಾಯ ಮತ್ತು ತೋಟಗಾರಿಕೆಯಲ್ಲಿ ಸಮಗ್ರ ವ್ಯವಸಾಯ ವಿಚಾರ ಸಂಕಿರಣವನ್ನುದ್ದೇಶಿಸಿ ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಕೆ.ಮಂಡಿ ಮಾತನಾಡಿದರು
ಆನೇಕಲ್: ಪುರಸಭೆ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ, ಹಸಿರು ಮನೆ ಬೆಳೆಗಾರರ ಸಂಘದಿಂದ ಹೂ ಬೆಳೆ ಬೇಸಾಯ ಮತ್ತು ತೋಟಗಾರಿಕೆಯಲ್ಲಿ ಸಮಗ್ರ ವ್ಯವಸಾಯ ವಿಚಾರ ಸಂಕಿರಣ ಮಂಗಳವಾರ ನಡೆಯಿತು.
ತಾಲ್ಲೂಕಿನ ವಿವಿಧೆಡೆಯ ಹೂವು ಬೆಳೆಗಾರರು ಮತ್ತು ಹಸಿರು ಮನೆ ಬೆಳೆಗಾರರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಕ್ಲಸ್ಟರ್ ಡೆವಲಪ್ಮೆಂಟ್ ಪ್ರೋಗ್ರಾಂ ಯೋಜನೆಯ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಲಾಯಿತು.
ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಕೆ.ಮಂಡಿ ಮಾತನಾಡಿ, ತಾಲ್ಲೂಕಿನ ಹೂವು ಬೆಳೆಗಾರರು ಜರ್ಬರ ಹೂವು ಬೆಳೆಯುವಲ್ಲಿ ರಾಜ್ಯ ಮತ್ತು ದೇಶದಲ್ಲಿಯೇ ಉತ್ತಮ ಹೆಸರುಗಳಿಸಿದ್ದಾರೆ. ಬಣ್ಣ ಮತ್ತು ಗುಣಮಟ್ಟದಿಂದಾಗಿ ಜರ್ಬರ ಪ್ರಸಿದ್ಧಿಯಾಗಿದೆ. ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದ್ಯತೆ ನೀಡುವ ಸಲುವಾಗಿ ಕ್ಲಸ್ಟರ್ ಡೆವಲಪ್ಮೆಂಟ್ ಕಾರ್ಯಕ್ರಮ ರೂಪಿಸಿದೆ ಎಂದರು.
ಬೆಳೆಯು ವಾರ್ಷಿಕ ₹100 ಕೋಟಿ ವಹಿವಾಟು ನಡೆಸಿದರೆ ಕ್ಲಸ್ಟರ್ ಡೆವಲಪ್ಮೆಂಟ್ ಪ್ರೋಗ್ರಾಂ ಅಡಿಯಲ್ಲಿ ವಿವಿಧ ಸೌಲಭ್ಯ ದೊರೆಯುತ್ತವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರು ಒಗ್ಗೂಡಿ ಜರ್ಬೆರಾ ಹೂವು ಬೆಳೆಯ ಮೂಲಕ ಈ ಯೋಜನೆ ಪಡೆಯಬಹುದಾಗಿದೆ ಎಂದರು.
ತೋಟಗಾರಿಕೆ ಬೆಳೆಯಲ್ಲಿ ಮಧ್ಯವರ್ತಿಗಳನ್ನು ತಪ್ಪಿಸಬೇಕಾದ ಅವಶ್ಯಕತೆಯಿದೆ. ಕೃಷಿಗೆ ಅವಶ್ಯಕವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ಉಪಯುಕ್ತವಾಗಿದೆ. ಹೊಸಬಗೆಯ ಹೂಗಳ ಬಗ್ಗೆ ಅಧ್ಯಯನ, ದಾಸ್ತಾನು, ತರಬೇತಿ ಮತ್ತು ಮಾರ್ಗದರ್ಶನವನ್ನು ಯೋಜನೆ ಅಡಿಯಲ್ಲಿ ಕಲ್ಪಿಸಲಾಗುವುದು. ತಾಲ್ಲೂಕಿನಲ್ಲಿ ಜರ್ಬರ, ಗುಲಾಬಿ, ಸೇವಂತಿಗೆ ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ಉತ್ತಮವಾಗಿ ಬೆಳೆಯುತ್ತಾರೆ. ರೈತರಿಗೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಮತ್ತು ಹೊಸ ಬಗೆಯ ತೋಟಗಾರಿಕಾ ವ್ಯವಸಾಯ ತಿಳಿಸುವ ಸಲುವಾಗಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.
ತೋಟಗಾರಿಕೆ ಬೆಳಗಾರರ ಸಂಘದ ಅಧ್ಯಕ್ಷ ಸೋಮಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಹೂಗಳ ಹಾವಳಿಯಿಂದಾಗಿ ರೈತರು ಕಷ್ಟಪಟ್ಟು ಬೆಳೆದ ನೈಸರ್ಗಿಕ ಹೂವುಗಳ ಬೆಲೆ ಕಡಿಮೆಯಾಗುತ್ತಿದೆ. ರೈತರಿಗೆ ಅನುಕೂಲ ಮಾಡುವ ಸಲುವಾಗಿ ಪ್ರತಿಯೊಬ್ಬರೂ ಸಹ ನೈಸರ್ಗಿಕ ಹೂಗಳನ್ನೇ ಬಳಸಬೇಕು ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ತೋಟಗಳಿಗೆ ಕ್ಷೇತ್ರ ಭೇಟಿಗಾಗಿ ಬರುವುದಿಲ್ಲ. ರೈತರಿಗೆ ಅನೂಕುಲ ಮಾಡಿಕೊಡಬೇಕು ಎಂದು ಸರ್ಕಾರ ಸಂಬಳ ನೀಡುತ್ತದೆ. ಆದರೆ ಅಧಿಕಾರಿಗಳು ರೈತರ ತೋಟಗಳತ್ತ ಬರುವುದಿಲ್ಲ. ಗೊಬ್ಬರಕ್ಕಾಗಿ ಕಚೇರಿ ಅಲೆಯುವಂತಾಗಿದೆ. ಗ್ರಾಮ ಸಹಾಯಕರು ಸರಿಯಾದ ಮಾಹಿತಿ ನೀಡುವುದಿಲ್ಲ. ರೈತರಾಗಿ ಹುಟ್ಟಿರುವುದೇ ಶಾಪವಾಗಿರುವಂತೆ ಭಾಸವಾಗುತ್ತಿದೆ. ತೋಟಗಾರಿಕೆ ಇಲಾಖೆ ತಮ್ಮ ಗುಣ ಬದಲಾಯಿಸಿಕೊಳ್ಳಬೇಕು ಎಂದು ರೈತ ಮೆಣಸಿಗನಹಳ್ಳಿ ರಘು ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ. ವಿಶ್ವನಾಥ್, ಕೆ.ಆರ್.ದೇವರಾಜ್, ಆನೇಕಲ್ ತಾಲ್ಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಗೀತಾ, ಹಸಿರು ಮನೆ ಬೆಳಗಾರರ ಸಂಘದ ಉಪಾಧ್ಯಕ್ಷ ಲೋಕೇಶ್, ಬ್ಯಾಡದೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡಹಾಗಡೆ ಹರೀಶ್ ಗೌಡ, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.