ಹೃದಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ಆನೇಕಲ್: ಆನೇಕಲ್ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಆರೋಗ್ಯ ಸಚಿವರನ್ನು ಕೋರಲಾಗಿದ್ದು, ತಾಲ್ಲೂಕಿನ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಅಗತ್ಯ ಇರುವ ಕಡೆ ಸುಸಜ್ಜಿತ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.
ಪಟ್ಟಣದ ಶ್ರೀರಾಮ ಕುಟೀರದಲ್ಲಿ ನಾರಾಯಣ ಹೆಲ್ತ್ ಆಯೋಜಿಸಿರುವ ಹೃದಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದೊಮ್ಮಸಂದ್ರದಲ್ಲಿ 100 ಹಾಸಿಗಳ ಸರ್ಕಾರಿ ಆಸ್ಪತ್ರೆಯ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಅತ್ತಿಬೆಲೆ, ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಸರ್ಕಾರಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮೂರು ಹೋಬಳಿಗಳಲ್ಲಿಯೂ ಆರೋಗ್ಯ ತಪಾಸಣಾ ಶಿಬಿರ ಮಾಡುವಂತೆ ನಾರಾಯಣ ಹೆಲ್ತ್‌ಗೆ ಮನವಿ ಸಲ್ಲಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲು ₹5ಸಾವಿರ ₹8ಸಾವಿರ ವರೆಗೆ ವೆಚ್ಚವಾಗಲಿದೆ. ನಿಮ್ಮ ಮನೆಯ ಬಾಗಿಲಿಗೆ ಉಚಿತ ಆರೋಗ್ಯ ತಪಾಸಣ ಸೌಲಭ್ಯ ಬಂದಿರುವುದರಿಂದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು.
ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಆರೋಗ್ಯ ಕ್ಷೇತ್ರದಲ್ಲಿಯೂ ಸಂಶೋಧನೆಗಳು ಹೆಚ್ಚಾಗುತ್ತಿದೆ. ತಂತ್ರಜ್ಞಾನದ ಪರಿಣಾಮದಿಂದ ಉತ್ತಮ ಮತ್ತು ಗುಣಮಟ್ಟದ ಆರೋಗ್ಯ ಪಡೆಯಬಹುದು. ಜಾಗತಿಕ ಮಟ್ಟದಲ್ಲಿ ಆರೋಗ್ಯ ಸೇವೆ ದೊರೆಯುವಂತಾಗಬೇಕು. ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವುದರಿಂದ ಸ್ವಸ್ಥ್ಯ ಸಮಾಜ ನಿರ್ಮಿಸಬಹುದು ಎಂದು ನಾರಾಯಣ ಹೆಲ್ತ್‌ನ ಅಧ್ಯಕ್ಷ ಡಾ.ದೇವಿ ಶೆಟ್ಟಿ ತಿಳಿಸಿದರು.
ಪುರಸಭೆ ಸದಸ್ಯರಾದ ಎನ್.ಎಸ್.ಪದ್ಮನಾಭ, ರಾಜೇಂದ್ರ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಜಿ.ಗೋಪಾಲ್, ನಾರಾಯಣ ಹೆಲ್ತ್‌ನ ಆಂಡ್ರಿಯಾ ವಾನ್ ಹೂವರ್, ಡಾ.ಕಾಮೇಶ್ವರಿ ಮಾಗಂಟಿ, ಡಾ.ಅಖಿಲ್ ನಾರಾಂಗ್, ಡಾ.ಭರತ್ ಪಟೇಲ್, ಡಾ.ಸತೀಶ್ ಗೋವಿಂದ್, ಡಾ.ಸೌರಭ್ ಬೂದಿರಾಜ್, ಎಸ್.ವಿ.ರಾಜಸಿಂಗ್, ನಿತಿನ್, ಆನಂದ್, ಆನೇಕಲ್ ಪುರಸಭಾ ಮುಖ್ಯಾಧಿಕಾರಿ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.