ADVERTISEMENT

ಆನೇಕಲ್: ಜೀವನಾಡಿ ಕೆರೆಗೆ ಜೀವ ತುಂಬಿದ ಕಾಳೇಶ್ವರಿ ಯುವ ಸೇನೆ

ಕಾಳೇಶ್ವರಿ ಗ್ರಾಮದ ಯುವಕರಿಂದ ವಡೇನಕೆರೆ ಅಭಿವೃದ್ಧಿ । ‘ಈ ಕೆರೆ ನಮ್ಮದು’ ಘೋಷ್ಯದಡಿ ಶ್ರಮದಾನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 3:06 IST
Last Updated 25 ಸೆಪ್ಟೆಂಬರ್ 2025, 3:06 IST
ಹಚ್ಚ ಹಸಿರಿನ ವಾತಾವರಣದ ನಡುವೆ ಕಂಗೊಳಿಸುತ್ತಿರುವ ಕಾಳೇಶ್ವರಿಯ ವಡೇನಕೆರೆ
ಹಚ್ಚ ಹಸಿರಿನ ವಾತಾವರಣದ ನಡುವೆ ಕಂಗೊಳಿಸುತ್ತಿರುವ ಕಾಳೇಶ್ವರಿಯ ವಡೇನಕೆರೆ   

ಆನೇಕಲ್: ಬೆಂಗಳೂರು ಹೊರವಲಯದ ಕೆರೆಗಳಿಗೆ ಕೈಗಾರಿಕೆ ಹಾಗೂ ಒಳಚರಂಡಿ ಕೊಳಚೆ ನೀರು ಸೇರಿ ಕಲುಷಿತಗೊಂಡು ತನ್ನ ಅಸ್ತಿತ್ವನ್ನೇ ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಬನ್ನೇರುಘಟ್ಟ ಸಮೀಪದ ಜೀವನಾಡಿಯೊಂದು ಯುವಕರ ಶ್ರಮದಿಂದ ಜೀವಉಳಿಸಿಕೊಂಡು ನಳನಳಿಸುತ್ತಿದೆ.

ಗಿಡಗೆಂಟಿ ಬೆಳೆದು, ‌ಕಸಗಳಿಂದ ಮಲಿನಗೊಂಡು ತನ್ನ ಇರುವಿಕೆಯನ್ನು ಕಳೆದುಕೊಳ್ಳುತ್ತಿದ್ದ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಕಾಳೇಶ್ವರಿಯ ವಡೇನಕೆರೆಯನ್ನು ಗ್ರಾಮದ ಯುವಕರು ಸ್ವಚ್ಛಗೊಳಿಸಿ, ಅಭಿವೃದ್ಧಿಗೊಳಿಸುವ ಮೂಲಕ ಜೀವ ತುಂಬಿದ್ದಾರೆ. 

ತಾಲ್ಲೂಕಿನ ಕಾಳೇಶ್ವರಿ ಗ್ರಾಮವು 15 ಮನೆಗಳಿರುವ ಪುಟ್ಟ ಊರು. ಕಾಳೇಶ್ವರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹೊಂದಿಕೊಂಡಿದೆ. ಈ ಗ್ರಾಮದ ವಡೇನಕೆರೆ ಗ್ರಾಮದ ಜಾನುವಾರುಗಳಿಗೆ ನೀರುಣಿಸುವ ಗಂಗೆ. ಹಲವು ವರ್ಷಗಳಿಂದ ಗ್ರಾಮದ ಜಲಮೂಲವಾಗಿದ್ದ ವಡೇನಕೆರೆಯು ಅವನತಿಯತ್ತ ಸಾಗುತ್ತಿತ್ತು. ಗ್ರಾಮದ ಪಕ್ಕದ ಬಡಾವಣೆಯ ತ್ಯಾಜ್ಯ ನೀರು ಕೆರೆಗೆ ಹರಿಯುತ್ತಿತ್ತು. ಇದರಿಂದ ಜಾನುವಾರುಗಳು ಕೆರೆಯ ನೀರು ಕುಡಿಯುವುದನ್ನೇ ಬಿಟ್ಟಿದ್ದವು.

ADVERTISEMENT

ಇದರಿಂದ ಹಾಗೂ ಕೆರೆ ಸ್ಥಿತಿ ನೋಡಿ ಮರುಗಿದ ಯುವ ಸೇನೆ ಕೆರೆ ಸ್ವಚ್ಛಗೊಳಿಸಿ ಅಭಿವೃದ್ಧಿ ಪಡಿಸಬೇಕೆಂದು ಶಪಥ ಮಾಡಿತು. ಮೊದಲಿಗೆ ಕೊಳಚೆ ನೀರು ಕೆರೆಗೆ ಹರಿಯುವುದನ್ನು ತಪ್ಪಿಸಿತು. ನಂತರ ಗ್ರಾಮ ಯುವಕರೆಲ್ಲ ಒಗ್ಗಟ್ಟಾಗಿ ‘ಈ ಕೆರೆ ನಮ್ಮದು’ ಘೋಷಣೆಯಡಿ ಕೆರೆಯ ಸ್ವಚ್ಛತೆ ಆರಂಭಿಸಿದರು. ಕೆರೆಯನ್ನು ಪ್ಲಾಸ್ಟಿಕ್‌ ಮುಕ್ತ ಕೆರೆಯಾಗಿ ಮಾಡಿದರು.

ವೈಲ್ಡ್‌ ಕರ್ನ್ಸರ್‌ವೇಷನ್‌ ಗ್ರೂಪ್‌ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಸೇರಿ 50ಕ್ಕೂ ಹೆಚ್ಚು ಮಂದಿ ಕೆರೆ ಹಸನುಗೊಳಿಸಲು ಶ್ರಮಿಸಿದರು.

ಕಾಳೇಶ್ವರಿ ಯುವಕರ ಬಳಗಕ್ಕೆ ವೈಲ್ಡ್‌ ಕರ್ನ್ಸರ್‌ವೇಷನ್‌ ಗ್ರೂಪ್‌ ಆರ್ಥಿಕ ಶಕ್ತಿ ತುಂಬಿದೆ. ಸ್ನೇಹ ಸಂಪದ ಸಂಘ ಎಂಬ ಸಂಸ್ಥೆಯು ಕೆರೆಯ ಪುನರ್‌ ನಿರ್ಮಾಣಕ್ಕೆ ಸಹಕಾರ ನೀಡಿತು. ಹೀಗಾಗಿ ಎಲ್ಲರ ಪರಿಶ್ರಮದಿಂದ ಕೆರೆ ಈಗ ಆಕರ್ಷಣೀಯವಾಗಿ ಕಾಣುತ್ತಿದೆ ಎನ್ನುತ್ತೆ ಯುವಕರ ಬಳಗ.

ಗ್ರಾಮದ ಯುವಕರು ವಿವಿಧ ಸಂಘ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಕೆರೆಯ ಗಡಿ ಗುರುತಿಸಿ ತಂತಿ ಬೇಲಿ ನಿರ್ಮಿಸಿದರು. ಕೆರೆಯ ನೀರು ಕೋಡಿ ಹೋಗಲು ಕೆರೆಯ ಕಟ್ಟೆ ಎತ್ತರಿಸಲಾಯಿತು. ಸುಸಜ್ಜಿತ ಕೋಡಿ ನಿರ್ಮಿಸಲಾಯಿತು.

ಮೂರು ತಿಂಗಳಿಗೊಮ್ಮೆ ಕೆರೆ ಹಬ್ಬ

ಕೆರೆ ಸ್ವಚ್ಛತೆ ಅಭಿವೃದ್ಧಿಗೆ ಸೀಮಿತವಾಗದ ಯುವಕರ ಬಳಗ ಕೆರೆಯ ಆವರಣದಲ್ಲಿ ‘ಕೆರೆ ಹಬ್ಬ’ ಕಾರ್ಯಕ್ರಮದಡಿಯಲ್ಲಿ ಕೆರೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೆರೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾಳೇಶ್ವರಿ ಗ್ರಾಮದ ಯುವಕರು ಕೆರೆ ಹಬ್ಬ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಕೆರೆ ಹಬ್ಬದಲ್ಲಿ ಪರಿಸರ ಕೆರೆಗಳ ಬಗ್ಗೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮೂರು ತಿಂಗಳಿಗೊಮ್ಮೆ ಕೆರೆ ಹಬ್ಬ ಆಚರಿಸಿ ಸುತ್ತಮುತ್ತಲಿನ ಗ್ರಾಮಗಳು ಕಾಳೇಶ್ವರಿ ಗ್ರಾಮಸ್ಥರು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಸ್ವಚ್ಛತೆ ಬೀದಿ ನಾಟಕದಂತಹ ಕಾರ್ಯಕ್ರಮಗಳ ಮೂಲಕ ಕೆರೆಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ವಾಪಸ್‌ ಬಂದ ಮೊಸಳೆ

ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಗ್ರಾಮದ ಯುವಕರು ಮುಂದಾಗಿದ್ದಾರೆ. ವೈಲ್ಡ್‌ ಕನ್ಸರ್‌ಷೇಷನ್‌ ಗ್ರೂಪ್‌ನ ಸಹಕಾರದೊಂದಿಗೆ ದಾನಿಗಳ ಸಹಾಯದಿಂದ ಹೂಳೇತ್ತುವ ಕಾರ್ಯ ಮಾಡಲಾಗುತ್ತಿದೆ. ಕೆರೆ ದುಸ್ಥಿತಿಯಲ್ಲಿದ್ದಾಗ ಕೆರೆಯಲ್ಲಿದ್ದ ಮೊಸಳೆ ಕಾಣೆಯಾಗಿತ್ತು. ಕೆರೆಯನ್ನು ಅಭಿವೃದ್ಧಿ ಪಡಿಸಿದ ನಂತರ ಮೊಸಳೆಯು ವಾಪಸ್ಸಾಗಿರುವುದು ಕೆರೆ ಅಭಿವೃದ್ಧಿಗೆ ದುಡಿದ ಯುವಕರದಲ್ಲಿ ಸಂತಸ ಮೂಡಿದೆ. ಕೆರೆಯಲ್ಲಿನ ನೀರಿನ ಪ್ರಮಾಣ ಸಹ ಹೆಚ್ಚಾಗಿದೆ. ಕೆರೆಯಲ್ಲಿನ ಜೀವ ವೈವಿಧ್ಯ ಮರುಕಳಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವುದು ಕಾಡು ಪ್ರಾಣಿಗಳಿಗೂ ವಡೇನಕೆರೆ ನೀರಿನ ಆಶ್ರಯತಾಣವಾಗಿದೆ ಎಂದು ಡಬ್ಲೂಸಿಜಿಯ ನಾಗೇಶ್‌ ತಿಳಿಸುತ್ತಾರೆ. ‘ಕಾಳೇಶ್ವರಿ ಗ್ರಾಮಸ್ಥರಿಗೆ ಕಾಡು ಪ್ರಾಣಿಗಳೆಂದರೆ ಹೆಚ್ಚಿನ ಪ್ರೀತಿ. ಮೊಸಳೆಯಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಬಡಾವಣೆಗಳವರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಮೊಸಳೆ ಹಿಡಿಯಲು ಬಂದ ಅರಣ್ಯ ಇಲಾಖೆಯನ್ನು ತಡೆದು ಕೆರೆಯಲ್ಲಿ ಮೊಸಳೆ ಸ್ವತಂತ್ರವಾಗಿ ಜೀವಿಸಲು ಬಿಡಿ ಎಂದು ಒತ್ತಾಯಿಸಿದ್ದೆವು. ಕಾಡು ಪ್ರಾಣಿಗಳಿಗೆ ತೊಂದರೆ ನೀಡಬಾರದು. ಆಗ ಅವು ಸಹ ನಮಗೆ ತೊಂದರೆ ನೀಡುವುದಿಲ್ಲ’ ಎಂದು ಕಾಳೇಶ್ವರಿಯ ಗ್ರಾಮಸ್ಥರು ತಿಳಿಸುತ್ತಾರೆ.

ಮೈಸೂರು ಮಹಾರಾಜರು ನಿರ್ಮಿಸಿದ ಕೆರೆ

ಕಾಳೇಶ್ವರಿಯ ವಡೇನಕೆರೆಗೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಮಹಾರಾಜರು ಇಲ್ಲಿನ ಭೇಟಿ ನೀಡಿದ್ದಾಗ ನೀರಿನ ಅಭಾವವಿತ್ತು ಇದನ್ನು ಮನಗಂಡ ಅವರು ಕೆರೆಯ ನಿರ್ಮಿಸಿ ಅಜ್ಞಾಪಿಸಿದ್ದರು. ಆಗ ಕೆರೆಯನ್ನು ಒಡೆಯನ ಕೆರೆ ಎನ್ನಲಾಗುತ್ತಿತ್ತು. ಬಾಯಿಂದ ಬಾಯಿಗೆ ಬರುತ್ತಾ ಒಡೆಯನ ಕೆರೆ ವಡೇನಕೆರೆಯಾಗಿದೆ ಎಂದು ಸ್ಥಳೀಯರಾದ ಮಹದೇವ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.