ಆನೇಕಲ್: ತಾಲ್ಲೂಕಿನ ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಸಂದ್ರ ಗ್ರಾಮದ ಸರ್ವೆ ನಂ.91ರಲ್ಲಿ ಬ್ಲಾಕ್ 9, 1 ಮತ್ತು 54ರಲ್ಲಿ ಆಶ್ರಯ ಯೋಜನೆಯಡಿ ಅಲೆಮಾರಿ ಸಮುದಾಯದ ಕೋಲೆ ಬಸವ ಜನಾಂಗಕ್ಕೆ ಮಂಜೂರಾಗಿರುವ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೋಲೆ ಬಸವ ಜನಾಂಗದವರು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕೋಲೆ ಬಸವ ಜನಾಂಗವು ಆರ್ಥಿಕವಾಗಿ ಹಿಂದುಳಿದಿದೆ. ಇವರಿಗೆ ಮನೆಗಳನ್ನು ನಿರ್ಮಿಸಿಕೊಡಲು ರಾಯಸಂದ್ರ ಗ್ರಾಮದ ಸರ್ವೆ ನಂ.91ರಲ್ಲಿ 1.22 ಎಕರೆ ಜಮೀನನ್ನು ಮಂಜೂರು ಮಾಡಿದೆ. ಆದರೆ ಖಾಸಗಿ ವ್ಯಕ್ತಿಗಳು ಏಕಾಏಕಿ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಸೆ.22ರಂದು ತಾಲ್ಲೂಕು ಪಂಚಾಯಿತಿ ಕಾರ್ಯಾಲಯವು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ದೂರು ನೀಡಿತ್ತು. ಆದರೂ ಸಹ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಪೊಲೀಸರು ಶೀಘ್ರ ಕ್ರಮ ವಹಿಸಿ ಒತ್ತುವರಿ ತೆರವುಗೊಳಿಸಿ ಜಾಗವನ್ನು ಕೋಲೆ ಬಸವ ಜನಾಂಗಕ್ಕೆ ನೀಡಬೇಕು ಎಂದು ಬಿಎಸ್‌ಪಿ ಪಕ್ಷದ ಮುಖಂಡ ಕೆ.ಸಿ.ನಾಗರಾಜು ಒತ್ತಾಯಿಸಿದರು.
ಬಡವರ ಜಾಗ ಕಬಳಿಸಲು ಹುನ್ನಾರ ನಡೆಸಿರುವುದು ಖಂಡನೀಯ. ಕೋಲೆ ಬಸವ ಜನಾಂಗದವರು ಮನೆ ನಿರ್ಮಿಸಿಕೊಡಲು ಆಶ್ರಯ ಯೋಜನೆಯಡಿಯಲ್ಲಿ ಜಾಗ ನೀಡಿದ್ದಾರೆ. ಒತ್ತುವರಿ ಮಾಡಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಇದರಿಂದಾಗಿ ಹಲವಾರು ಅನುಮಾನಗಳನ್ನು ಮೂಡಿಸುತ್ತಿದೆ ಎಂದರು.
ಕೋಲೆ ಬಸವ ಜನಾಂಗಕ್ಕೆ ಮಂಜೂರಾಗಿರುವ ಜಾಗ ಒತ್ತುವರಿಯಾಗಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒಗೆ ದೂರು ನೀಡಲಾಗಿದೆ. ಬಡ ಸಮುದಾಯದವರಿಗೆ ನೀಡಿರುವ ಜಾಗವನ್ನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ವಹಿಸಬೇಕು. ಕೋಲೆ ಬಸವ ಸಮುದಾಯದವರು ಸ್ವಂತ ಸೂರು ಹೊಂದುವಂತಾಗಲು ಮಂಜೂರು ಮಾಡಿರುವ ಜಾಗವನ್ನು ಕಬಳಿಸಲು ಹುನ್ನಾರ ನಡೆಸಿರುವುದು ಖಂಡನೀಯ ಎಂದು ವಕೀಲ ಪುರುಷೋತ್ತಮ್ ತಿಳಿಸಿದರು.
ವಕೀಲರಾದ ಶಿವರಾಜು, ಮುತ್ತಾನಲ್ಲೂರು ಶ್ರೀನಿವಾಸ್, ಮುಖಂಡರಾದ ಮೂರ್ತಿ, ಎಂ.ಸಿ.ಹಳ್ಳಿ ವೇಣು, ಕೋಲೆ ಬಸವ ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.