
ಆನೇಕಲ್: ನಾಲ್ಕು ಕಾರ್ಮಿಕ ಸಂಹಿತೆ ವಿರೋಧಿಸಿ, ನರೇಗಾ ಉಳಿಸಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರಕ್ಕೆ ಆನೇಕಲ್‌ಮಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆಯಿತು.
ತಾಲೂಕಿನ ಐದು ಕೈಗಾರಿಕಾ ಪ್ರದೇಶಗಳಲ್ಲಿ ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್, ಈಸ್ಟರ್ನ್ ಸಿಲ್ಕ್ಸ್ ಕಾರ್ಮಿಕರ ಸಂಘ, ರಾಜ್ಯ ಅಂಗನವಾಡಿ ನೌಕರರ ಸಂಘ, ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘಗಳು ಜಂಟಿಯಾಗಿ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿದವು.
ಬಂದ್ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧಡೆ ಬೆಳಗ್ಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಪ್ರತಿಭಟನಕಾರರು ಕೆಂಪು ಧ್ವಜಗಳನ್ನು ಹಿಡಿದು ಮೆರವಣಿಗೆ ನಡೆಸಿ ಬಂದ್ ಬೆಂಬಲಿಸುವಂತೆ ಆಗ್ರಹಿಸಿದರು. ಕೈಗಾರಿಕಾ ಪ್ರದೇಶಗಳಾದ ಜಿಗಣಿ, ಅತ್ತಿಬೆಲೆ ಸೇರಿದಂತೆ ವಿವಿದೆಡೆ ಬಂದ್ ನಡೆಸಲಾಯಿತು. ಗುರುವಾರ ಬೆಳಗ್ಗೆ 11ರ ನಂತರ ಅಂಗಡಿಗಳು ಎಂದಿನಂತೆ ತೆರೆಯಲಾಯಿತು. ಬಸ್‌ಗಳು ಎಂದಿನಂತೆ ಸಂಚರಿಸಿದವು ಮತ್ತು ಶಾಲಾ-ಕಾಲೇಜುಗಳು ಯಥಾಸ್ಥಿತಿ ತೆರದಿದ್ದವು.
ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದ ಸಾರ್ವಜನಿಕರು ಬದುಕುವುದೇ ಕಷ್ಟವಾಗಿದೆ. ನೂತನ ಕಾರ್ಮಿಕ ಸಂಹಿತೆಗಳು ಕಾರ್ಮಿಕರಿಗೆ ಮರಣ ಶಾಸನವಾಗಲಿದೆ. ವ್ಯಾಪಾರ ಸುಲಲಿತಗೊಳಿಸುವ ಹೆಸರಿನಲ್ಲಿ ಯೂನಿಯನ್ ಮುಕ್ತ ವಾತಾವರಣ ಕಲ್ಪಿಸಲು ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತಾಳುತ್ತಿದೆ ಎಂದು ಸಿಐಟಿಯು ಜಿಲ್ಲಾ ಪದಾಧಿಕಾರಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಕಾರ್ಮಿಕ ಮತ್ತು ರೈತ ವಿರೋಧಿಯಾಗಿದೆ. ಕೇಂದ್ರ ಸರ್ಕಾರದ ದ್ವಂದ್ವ ನೀತಿಗಳಿಂದ ರೈತರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರವು ಕೇಂದ್ರದ ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸಬೇಕು. ಕೇಂದ್ರ ಸರ್ಕಾರವು ವಿಬಿ ಜಿ ರಾಮ್ ಜಿ, ವಿದ್ಯುತ್ ತಿದ್ದುಪಡಿ ಮತ್ತು ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಿ.ಮಹದೇಶ್ ಎಚ್ಚರಿಕೆ ನೀಡಿದರು.
ಸಿಐಟಿಯು ಮುಖಂಡರಾದ ಮಂಜುನಾಥ್, ಬಾಲರಾಜ್, ಹನುಮಯ್ಯ, ನಾಗಣ್ಣ, ಅಪ್ಪಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.