
ಆನೇಕಲ್: ತಾಲ್ಲೂಕಿನ ಚಂದಾಪುರದಲ್ಲಿ ಸೋಮವಾರ ನಡೆದ ‘ ಆನೇಕಲ್ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಳಿವು ಉಳಿವು’ ವಿಚಾರಗೋಷ್ಠಿಯಲ್ಲಿ ಆನೇಕಲ್‌ನ ಗ್ರಾಮ ಪಂಚಾಯಿತಿಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ಗೆ ಸೇರ್ಪಡೆಗೊಳಿಸಬಾರದು. ಇದರಿಂದ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದ್ದು, ಸ್ಥಳೀಯರು ಅಧಿಕಾರದಿಂದ ವಂಚಿತರಾಗಲಿದ್ದಾರೆ ಎಂಬ ಆತಂಕ ವ್ಯಕ್ತವಾಯಿತು. ಯಾವುದೇ ಕಾರಣಕ್ಕೂ ಗ್ರಾ.ಪಂಗಳನ್ನು ಜಿಬಿಎ ಸೇರಿಸಬಾರದೆಂದು ಆಗ್ರಹ ಒಕ್ಕೊರಳಿನಿಂದ ಕೇಳಿ ಬಂತು.
ತಾಲ್ಲೂಕಿನ ಸಮನ ಸಮನಸ್ಕರು ಮತ್ತು ವಿವಿಧ ಸಂಘಟನೆ, ಸಂಘ–ಸಂಸ್ಥೆ ಜತೆಗೂಡಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಕನ್ನಡ ಪರ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು, ಲೇಖಕರು, ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಿ ತಮ್ಮ ವಾದ ಮಂಡಿಸಿದರು.
ಆನೇಕಲ್ ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳು ಗ್ರೇಟರ್ ಬೆಂಗಳೂರಿಗೆ ಸೇರ್ಪಡೆಗೊಳ್ಳುವುದರಿಂದ ಈ ಭಾಗದಲ್ಲಿ ಆಗುವ ಲಾಭ– ನಷ್ಟ ಕುರಿತು ಚರ್ಚೆ ನಡೆಯಿತು. ಗ್ರೇಟರ್ ಬೆಂಗಳೂರಿಗೆ ಆನೇಕಲ್ ಸೇರ್ಪಡೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆ ವಿಚಾರಗೋಷ್ಠಿ ಚರ್ಚೆಯ ಕೇಂದ್ರ ಬಿಂದುವಾಗಿತ್ತು.
ಗ್ರಾಮ ಪಂಚಾಯಿತಿಗಳನ್ನು ಗ್ರೇಟರ್ ಬೆಂಗಳೂರಿಗೆ ಸೇರ್ಪಡೆಗೊಳಿಸುವುದರಿಂದ ಸ್ಥಳೀಯರು ಮತ್ತು ನಾಯಕರು ಅಧಿಕಾರದಿಂದ ವಂಚಿತರಾಗುತ್ತಾರೆ. ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಆಗುವುದಿಲ್ಲ. ಹೀಗಾಗಿ ಆನೇಕಲ್ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳನ್ನು ಜಿಬಿಎ ವ್ಯಾಪ್ತಿಗೆ ಸೇರ್ಪಡೆಗೊಳಿಸಬಾರದು ಎಂದು ಹೆನ್ನಾಗರ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಜೆ.ಪ್ರಸನ್ನ ಕುಮಾರ್ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿಗಳು ಪ್ರಜಾಪ್ರಭುತ್ವದ ಬೆನ್ನೆಲುಬಾಗಿದೆ. ಪಂಚಾಯತ್ ರಾಜ್ ಕಾಯ್ದೆ ಅಡಿ ಸಕಾಲಕ್ಕೆ ಚುನಾವಣೆಗಳನ್ನು ನಡೆಸಬೇಕು ಆದರೆ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಆರೇಳು ವರ್ಷ ಕಳೆದರೂ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಿಲ್ಲ ಎಂದು ಬೇಸರಿಸಿದರು.
ರಿಯಲ್ ಎಸ್ಟೇಟ್ ಮತ್ತು ಬಂಡವಾಳ ಶಾಹಿಗಳ ಒತ್ತಡದಿಂದ ಆನೇಕಲ್ ತಾಲ್ಲೂಕನ್ನು ಜಿಬಿಎಗೆ ಸೇರ್ಪಡೆಗೊಳಿಸಲಾಗುತ್ತಿದೆ. ಇದರಿಂದ ಆನೇಕಲ್ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಸ್ಮಿತೆ ಕಳೆದುಹೋಗಲಿದೆ ಎಂದು ಅಹಿಂದ ಮುಖಂಡ ಆನೇಕಲ್ ದೊಡ್ಡಯ್ಯ ಕಳವಳ ವ್ಯಕ್ತಪಡಿಸಿದರು.
ನಗರೀಕರಣದ ಪ್ರಭಾವದಿಂದ ಆನೇಕಲ್ ತಾಲ್ಲೂಕನ್ನು ಜಿಬಿಎಗೆ ಸೇರ್ಪಡೆಗೊಳಿಸಲಾಗುತ್ತಿದೆ. ಇದರಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ದೊರೆಯುತ್ತಿರುವ ಸೌಲಭ್ಯಗಳು ಸಂಪೂರ್ಣವಾಗಿ ನಿಲ್ಲುತ್ತವೆ. ಸಹಕಾರಿ ಸಂಘಗಳು ಮತ್ತು ಮಹಿಳಾ ಒಕ್ಕೂಟಗಳು ಬಲಹೀನವಾಗುತ್ತವೆ ಎಂದು ರೈತ ಮುಖಂಡರಾದ ಪುಷ್ಪಲತಾ ಹೇಳಿದರು.
ಆನೇಕಲ್ ತಾಲ್ಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮತ್ತು ಗ್ರಾಮ ಪಂಚಾಯಿತಿಗಳನ್ನು ಗ್ರೇಟರ್ ಬೆಂಗಳೂರಿಗೆ ಸೇರ್ಪಡೆಗೊಳಿಸುವುದರಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆ ಆಗುತ್ತದೆ. ಜಿಬಿಎನಲ್ಲಿ 20ಸಾವಿರಕ್ಕೆ ಒಬ್ಬ ಪ್ರತಿನಿಧಿಯಿರುತ್ತಾರೆ. ಪ್ರತಿ ಗ್ರಾಮದಲ್ಲಿಯೂ ಎರಡರಿಂದ ಮೂರು ಮಂದಿ ಗ್ರಾಮ ಪಂಚಾಯಿತಿ ಸದಸ್ಯರಿರುತ್ತಾರೆ. ಕುಡಿಯುವ ನೀರು ಸ್ವಚ್ಛತೆ ಬೀದಿ ದೀಪ ಸೇರಿದಂತೆ ಸಮಸ್ಯೆಗಳನ್ನು ಅವರಿಗೆ ತಿಳಿಸಬಹುದು. ಒಂದು ವೇಳೆ ಗ್ರೇಟರ್ ಬೆಂಗಳೂರು ಆಗುವುದರಿಂದ ಎರಡು ಮೂರು ಪಂಚಾಯಿತಿಗೆ ಒಬ್ಬ ಪ್ರತಿನಿಧಿ ದೊರೆಯುತ್ತಾರೆ. ಅವರನ್ನು ಸಂಪರ್ಕ ಮಾಡುವುದೇ ಕಷ್ಟವಾಗುತ್ತದೆ. ಹಾಗಾಗಿ ಸರ್ಕಾರ ಈ ಕ್ರಮವನ್ನು ಮರುಪರಿಶೀಲನೆ ನಡೆಸಬೇಕು ಎಂದು ಎಂದು ಚಿನ್ಮಯ ಸೇವಾ ಸಂಸ್ಥೆಯ ಚಿನ್ನಪ್ಪ.ವೈ.ಚಿಕ್ಕಹಾಗಡೆ ಹೇಳಿದರು.
ಲೇಖಕ ತಾ.ನಂ.ಕುಮಾರಸ್ವಾಮಿ, ಬಿಜೆಪಿ ಆನೇಕಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಆರ್.ಟಿ.ಅಶೋಕ್, ಮಾಜಿ ಸೈನಿಕ ವೇಣು, ವಕೀಲ ಮೂರ್ತಿ ಕುಮಾರ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಕಿರಣ್ ಪ್ರಭಾಕರ್ ರೆಡ್ಡಿ, ಪತ್ರಕರ್ತರಾದ ಅಂಬರೀಶ್, ಸಿ.ಆರ್.ವಿಜಯ್ ಕುಮಾರ್, ಮುರುಳಿ ಮೋಹನ್ ಕಾಟಿ, ಮುಖಂಡರಾದ ಗೌರಿಶಂಕರ್, ಗಿರಿಜಾ, ಸುಭದ್ರ, ಪ್ರಮೀಳಾ, ನೇತ್ರ, ರವಿ, ಕಿರಣ್, ಭರತ್ ಗೌಡ, ಯಡವನಹಳ್ಳಿ ಕೃಷ್ಣಪ್ಪ, ಆನಂದ್ ಇದ್ದರು.
ಜಿಬಿಎಗೆ ಆನೇಕಲ್: ರಿಯಲ್ ಎಸ್ಟೇಟ್, ಬಂಡವಾಳಶಾಹಿ ಒತ್ತಡ ಗ್ರಾಮ ಪಂಚಾಯಿಗಳ ಅಸ್ಮಿತೆಗೆ ಧಕ್ಕೆ ಅಧಿಕಾರ ವಂಚಿತರಾಗಲಿರುವ ಸ್ಥಳೀಯರು, ಮುಖಂಡರ ಕೃಷಿ ಚಟುವಟಿಕೆ, ಸಹಕಾರಿ ಸಂಘಗಳ ಮೇಲೆ ದುಷ್ಪರಿಣಾಮ
ಅಹಿಂದ ಸಮುದಾಯಕ್ಕೆ ಅನ್ಯಾಯ ತಾಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಂಖ್ಯೆ ಅಂದಾಜು 900 ಇದೆ. ಈ ಭಾಗವನ್ನು ಗ್ರೇಟರ್ ಬೆಂಗಳೂರಿಗೆ ಸೇರ್ಪಡೆಗೊಳಿಸುವುದರಿಂದ ಕಾರ್ಪೊರೇಟರ್‌ಗಳ ಸಂಖ್ಯೆ ಅಂದಾಜು 20ಕ್ಕೆ ಬರಲಿದೆ. ಇದರಿಂದ 880 ಮಂದಿ ತಮ್ಮ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ. ಚುನಾವಣೆಗಳಲ್ಲಿ ಜನಪ್ರತಿನಿಧಿಯ ಸ್ಥಾನಗಳು ಶ್ರೀಮಂತ ಪಾಲಾಗುತ್ತದೆ ಇದರಿಂದಾಗಿ ಅಹಿಂದ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ಅಹಿಂದ ಮುಖಂಡ ಆನೇಕಲ್ ದೊಡ್ಡಯ್ಯ ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.