ADVERTISEMENT

‌ಆನೇಕಲ್: ಏಕಕಾಲಕ್ಕೆ ಚಿರತೆ, ಕಾಡಾನೆ, ಕಾಡೆಮ್ಮೆ ಪ್ರತ್ಯಕ್ಷ

ಸಂಜೆಯಾಗುತ್ತಿದ್ದಂತೆ ಸಾರ್ವಜನಿಕರು ಭಯಭೀತಿ, ಅರಣ್ಯ ಸಿಬ್ಬಂದಿ ಹೈರಾಣ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 8:04 IST
Last Updated 20 ಡಿಸೆಂಬರ್ 2025, 8:04 IST
ಆನೇಕಲ್‌ ಸಮೀಪದ ಬಾಡರಹಳ್ಳಿಯಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನ್‌ ಅಳವಡಿಸಿರುವುದು
ಆನೇಕಲ್‌ ಸಮೀಪದ ಬಾಡರಹಳ್ಳಿಯಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನ್‌ ಅಳವಡಿಸಿರುವುದು   

ಆನೇಕಲ್: ಪಟ್ಟಣ ಸಮೀಪದ ಬಾಡರಳ್ಳಿಯಲ್ಲಿ ಚಿರತೆ ಓಡಾಟ ನಡೆಸಿದೆ. ಈ ಹಿನ್ನೆಲೆಯಲ್ಲಿ ಸಂಜೆಯಾಗುತ್ತಿದ್ದಂತೆ ಸಾರ್ವಜನಿಕರು ಭಯಭೀತರಾಗಿದ್ದಾರೆ. 

ರೈತ ನಾಗರಾಜು ತಮ್ಮ ತೋಟದ ಸಮೀಪ ಚಿರತೆ ನೋಡಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಚಿರತೆ ಹೆಜ್ಜೆ ಗುರುತು ಬಗ್ಗೆ ಪರಿಶೀಲನೆ ನಡೆಸಿದರು. ಚಿರತೆ ಸೆರೆ ಹಿಡಿಯುವ ಸಲುವಾಗಿ ತೋಟವೊಂದರಲ್ಲಿ ಬೋನ್ ಸಹ ಅಳವಡಿಸಲಾಗಿದೆ. ಈ ನಡುವೆ ಚಿರತೆಯು ಸಿಡಿಹೊಸಕೋಟೆ ಸಮೀಪ ಓಡಾಡಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು ಅಲ್ಲಿಯೂ ಸಿಬ್ಬಂದಿ ಪರಿಶೀಲಿಸಿದರು.

ಬಾಡರಹಳ್ಳಿ, ಮುತ್ಯಾಲು ಮಡಗು ತಮಿಳುನಾಡು ಅರಣ್ಯ ಪ್ರದೇಶ ಸನಿಹದಲ್ಲಿದೆ. ಇಲ್ಲಿಂದ ಚಿರತೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿರತೆ ಇರುವ ಬಗ್ಗೆ ಪೋಸ್ಟ್ ಹಾಕಿರುವ ಹಿನ್ನೆಲೆಯಲ್ಲಿ ಕತ್ತಲಾಗುತ್ತಿದ್ದಂತೆ ಈ ರಸ್ತೆಯಲ್ಲಿ ಸಂಚರಿಸಲು ಗ್ರಾಮಸ್ಥರು ಮತ್ತು ಸ್ಥಳೀಯರು ಭಯಪಡುತ್ತಿದ್ದಾರೆ.

ADVERTISEMENT

ಕಾಡಾನೆಗಳು ಪ್ರತ್ಯಕ್ಷ : ಆಹಾರ ಅರಸಿ ಐದು ಕಾಡಾನೆಗಳ ಹಿಂದು ಕಾಡಿನಿಂದ ನಾಡಿಗೆ ಬಂದಿವೆ. ಕಾಡಂಚಿನ ಗ್ರಾಮಗಳ ರೈತರಿಗೆ ಆತಂಕ ಶುರುವಾಗಿದೆ. ತಾಲೂಕಿನ ಮುತ್ಯಾಲಮಡುಗು ಸಮೀಪದ ಪಟ್ಟಣಗೆರೆ ಗೊಲ್ಲಹಳ್ಳಿ, ಬಿದರ ಕಾಡಹಳ್ಳಿ, ಸುನಿವರ ಸಮೀಪ ಐದು ಕಾಡಾನೆಗಳು ಓಡಾಡುತ್ತಿರುವುದು ಕಂಡು ಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯನ್ನು ಓಡಿಸಲು ಹರಸಾಹಸ ಪಡುತ್ತಿವೆ. ಕಾಡಾನೆಗಳು ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಿಗೆ ಅಟ್ಟುತ್ತಿದ್ದಾರೆ. ಬ್ಯಾಟರಿ ಬೆಳಕು ಮತ್ತು ಪಟಾಕಿ ಸದ್ದಿಗೆ ಕಾಡಾನೆಗಳು ಅರಣ್ಯದ ಗಡಿ ತಲುಪಿವೆ.

ಟಿವಿಎಸ್‌ ಕ್ರಾಸ್‌ನಲ್ಲಿ ಕಾಡೆಮ್ಮೆ ಓಡಾಟ: ತಾಲ್ಲೂಕಿನ ಮಾಯಸಂದ್ರ, ಬಳ್ಳೂರು, ಟಿವಿಎಸ್‌ ಕ್ರಾಸ್‌ ಗುರುವಾರ ಸಂಜೆ ಕಾಡೆಮ್ಮೆ ಓಡಾಟ ನಡೆಸಿದೆ.

ಹೈರಾಣದ ಅರಣ್ಯ ಇಲಾಖೆ ಸಿಬ್ಬಂದಿ: ಕಳೆದ 15 ದಿನಗಳ ಹಿಂದೆ ಕಾಡೆಮ್ಮೆಯೊಂದು ಆನೇಕಲ್, ಅತ್ತಿಬೆಲೆ, ದೊಡ್ಡಹಾಗಡೆ, ಸೊಪ್ಪಹಳ್ಳಿ ಸೇರಿದಂತೆ ವಿವಿಧೆಡೆ ಓಡಾಡಿತ್ತು. ಇದೀಗ ಚಿರತೆ, ಕಾಡೆಮ್ಮೆ ಮತ್ತು ಕಾಡಾನೆಗಳು ಏಕಕಾಲದಲ್ಲಿ ದಾಳಿ ಮಾಡಿರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸದಿಂದ ಕೆಲಸ ಮಾಡುತ್ತಿದ್ದಾರೆ. 

ಚಿರತೆ ಸೆರೆಗೆ ಪ್ರಯತ್ನ

‘ಆನೇಕಲ್‌ ಪಟ್ಟಣದ ಸಮೀಪದಲ್ಲಿಯೇ ಚಿರತೆ ಓಡಾಟ ನಡೆಸಿರುವುದು ಕಂಡು ಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರದಿಂದ ಕಾವಲು ಕಾಯುತ್ತಿದ್ದಾರೆ. ಕೆಲವೇ ಮೀಟರ್‌ಗಳ ದೂರದಲ್ಲಿ ಪಟ್ಟಣವಿದ್ದು ಚಿರತೆ ಬಂದರೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಹೆಚ್ಚು ನಿಗಾ ವಹಿಸಬೇಕು. ರಾತ್ರಿ ಗಸ್ತು ಬೋನ್‌ ಅಳವಡಿಕೆ ಮಾಡಲಾಗಿದೆ. ಶನಿವಾರದೊಳಗಾಗಿ ಚಿರತೆ ಸೆರೆ ಹಿಡಿಯುವ ಪ್ರಯತ್ನ ಮಾಡಲಾಗುವುದು’ ಶಿವರಾಜ್‌ ಡಿಆರ್‌ಎಫ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.