ದೇವನಹಳ್ಳಿ: ಮಕ್ಕಳು ಮತ್ತು ಯುವ ಜನಾಂಗವನ್ನು ಮಾದಕ ವಸ್ತು ದುಶ್ಚಟದಿಂದ ದೂರವಿರಿಸುವ ಕೆಲಸ ಮೊದಲಿಗೆ ತಮ್ಮ ಮನೆಗಳಿಂದಲೇ ಆರಂಭವಾಗಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಹೇಳಿದರು.
ತಾಲ್ಲೂಕಿನ ಕುಂದಾಣ ಹೋಬಳಿಯ ವಿಶ್ವನಾಥಪುರದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿರುವ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಮಕ್ಕಳ ಬಳಿ ಮಾದಕ ವಸ್ತುಗಳನ್ನು ತರಿಸಿವುದು ಕಾನೂನು ಬಾಹಿರ. ಹಾಗಾಗಿ ಹೆತ್ತವರು, ಶಿಕ್ಷಕರು ಮಾತ್ರವಲ್ಲದೆ ಸಮಾಜದ ಪ್ರತಿಯೊಬ್ಬರು ಕೂಡ ಮಾದಕ ವಸ್ತುಗಳ ದುಷ್ಪರಿಣಾಮ ಅರಿತು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲಾರು ಮುಂದಾಗಬೇಕು ಎಂದರು.
ಭವಿಷ್ಯಕ್ಕೆ ಮಾರಕ ಆಗಿರುವ ಮಾದಕ ವಸ್ತುಗಳಿಂದ ದೂರವಿದ್ದು ಉನ್ನತ ಶಿಕ್ಷಣ ಹಾಗೂ ಸದೃಢ ಭವಿಷ್ಯದ ಕಡೆ ಒತ್ತು ನೀಡಬೇಕು. ವಿದ್ಯಾರ್ಥಿಗಳು, ಯುವ ಪೀಳಿಗೆ ಮಾದಕ ವಸ್ತುಗಳ ವ್ಯಸನದಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ, ವ್ಯಸನಿಗಳಿಂದ ಆತನ ಕುಟುಂಬ ಹಾಗೂ ಸಮಾಜ ಕೂಡ ಸಮಸ್ಯೆ ಎದುರಿಸಬೇಕಾಗಿದೆ ಹಾಗಾಗಿ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಮಾಜಕ್ಕೆ ನೈಜ ಅರಿವು ಮೂಡಿಸುವುದು ಅವಶ್ಯಕ ಎಂದರು.
ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜನಪ್ಪ, ವಿದ್ಯಾರ್ಥಿಗಳು ನಮ್ಮ ದೇಶದ ಭವಿಷ್ಯ ಅವರು ಮಾದಕ ವಸ್ತುಗಳಿಗೆ ಬಲಿಯಾಗದಂತೆ ಆರಂಭದಲ್ಲೇ ತಡೆಯಬೇಕು. ಮನಸ್ಸು ದುರ್ಬಲವಾದಾಗಲೇ ವ್ಯಕ್ತಿ ವ್ಯಸನದತ್ತ ಆಕರ್ಷಿತನಾಗುತ್ತಾನೆ. ಹಾಗಾಗಿ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು, ಆಟಪಾಠ, ಕ್ರೀಡೆ, ಯೋಗ, ಸಂಸ್ಕೃತಿಕ ಚಟುವಟಿಕೆಗಳ ಮೂಲಕ ಮನಸ್ಸು ನಿರ್ದಿಷ್ಟಗೊಳಿಸುವುದು ಅತ್ಯವಶ್ಯಕ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ್ ಕುಮಾರ್, ಕುಡಿತ ವ್ಯಕ್ತಿಯನ್ನು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿಸುತ್ತದೆ. ದೇಶ ಅಭಿವೃದ್ಧಿ ಹೊಂದಲು ಕೇವಲ ಆರ್ಥಿಕವಾಗಿ ಮುಂದುವರೆದರೆ ಸಾಲದು, ಯುವಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.
‘ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ’ ಮಾತನಾಡಿದ ಸಂಪನ್ಮೂಲ ವ್ಯಕ್ತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಯಲಕ್ಷ್ಮಿ, ವ್ಯಕ್ತಿಯ ಆಲೋಚನೆ ಬದಲಾಯಿಸುವ ಶಕ್ತಿ ಮೆದುಳಿಗಿರುತ್ತದೆ. ಮಾದಕ ವಸ್ತು ಬಳಕೆಯಿಂದ ಮಿದುಳಿನಲ್ಲಿ ಉತ್ಪಾದನೆಯಾಗುವ ನೈಸರ್ಗಿಕವಾದ ರಾಸಾಯನಿಕಗಳ ಪ್ರಮಾಣ ಕುಗ್ಗುತ್ತದೆ. ನಿರಂತರ ಮಾದಕ ವಸ್ತುಗಳ ಸೇವನೆ ಮಿದುಳಿನ ಕಾರ್ಯ ವಿಧಾನವನ್ನು ಬದಲಾಯಿಸುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಂದ ವ್ಯಸನ ಮುಕ್ತ ಸಮಾಜ ನಿರ್ಮಾಣದ ಕುರಿತು ಜಾಥಾ ನಡೆಯಿತು. ಕಾರ್ಯಕ್ರಮ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ನಡೆಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಅಶೋಕ್ ಕುಮಾರ್, ಶಾಲಾ ಹಾಗೂ ಕಾಲೇಜು ಶಿಕ್ಷಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.