ADVERTISEMENT

ಆಲೂಗಡ್ಡೆ ಬೆಳೆಗೆ ರೋಗದ ಆತಂಕ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 13:00 IST
Last Updated 22 ಜನವರಿ 2019, 13:00 IST
ವಿಜಯಪುರದಲ್ಲಿ ರೈತರು ಬೆಳೆದಿರುವ ಆಲೂಗಡ್ಡೆ ಬೆಳೆಯು ಹೂ ಬಿಡುವ ಹಂತದಲ್ಲಿದೆ
ವಿಜಯಪುರದಲ್ಲಿ ರೈತರು ಬೆಳೆದಿರುವ ಆಲೂಗಡ್ಡೆ ಬೆಳೆಯು ಹೂ ಬಿಡುವ ಹಂತದಲ್ಲಿದೆ   

ವಿಜಯಪುರ: ದಟ್ಟ ಮಂಜಿನಿಂದಾಗಿ ಆಲೂಗಡ್ಡೆ ಬೆಳೆಯ ಇಳುವರಿ ಕುಂಠಿತವಾಗುತ್ತದೆ ಎನ್ನುವ ಆತಂಕ ರೈತರನ್ನು ಕಾಡಲಾರಂಭಿಸಿದೆ.
ಮುಂಜಾನೆ ಬೀಳುತ್ತಿರುವ ದಟ್ಟವಾದ ಮಂಜಿನಿಂದಾಗಿ ಆಲೂಗಡ್ಡೆ ಬೆಳೆಗೆ ಕೊಳಪೆರೋಗ, ಚುಕ್ಕೆರೋಗ, ಎಲೆ ಕೊಳೆಯುವ ರೋಗ ಬರುವ ಭೀತಿಯಲ್ಲಿದ್ದಾರೆ. ಇದನ್ನು ಹೊರತು ಪಡಿಸಿ ಬೂದುರೋಗವೂ ಕಾಡಬಹುದು ಎನ್ನುವ ಆತಂಕದಲ್ಲಿ ಔಷಧಿಗಳ ಸಿಂಪಡಣೆಗೆ ರೈತರು ಮುಂದಾಗುತ್ತಿದ್ದಾರೆ.

ಬೆಳೆಯು ಹೂ ಬಿಡುತ್ತಿರುವ ಹಂತದಲ್ಲಿದೆ. ಈ ಹಂತದಲ್ಲಿ ರೋಗ ಕಾಡಿದರೆ, ಕಾಂಡ ಕೊಳೆತು ಹೋಗುವ ಸಂಭವವೂ ಇರುತ್ತದೆ. ಎಲೆಗಳು ಬಾಡಿಹೋಗಿ ಉದುರುತ್ತವೆ. ಈಗ ಆಲೂಗಡ್ಡೆ ಬೆಳವಣಿಗೆಯಾಗುವ ಸಮಯವಾದದ್ದರಿಂದ ಇಳುವರಿಯು ಕುಂಠಿತವಾಗಬಹುದೆನ್ನುವ ಭೀತಿ ರೈತರನ್ನು ಕಾಡುತ್ತಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೂಕ್ತ ಮಾಹಿತಿಯನ್ನು ಒದಗಿಸಬೇಕು ಎಂದು ರೈತ ಕೆ.ಮುನಿರಾಜು ಹೇಳಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ‘ಹಾಸನ, ಕೋಲಾರ ಭಾಗಗಳಲ್ಲಿ ಬೆಳೆಯುವಂತೆ ಆಲೂಗಡ್ಡೆ ಬೆಳೆ ಬೆಳೆಯುವುದಿಲ್ಲ, ನಮ್ಮ ತಾಲ್ಲೂಕಿನಲ್ಲಿ ಕೇವಲ 35 ಹೆಕ್ಟೇರ್‌ ಬೆಳೆದಿದ್ದಾರೆ. ಚನ್ನರಾಯಪಟ್ಟಣ ಹೋಬಳಿ, ಕುಂದಾಣ ಹೋಬಳಿಗಳಲ್ಲಿ ಬೆಳೆಯುತ್ತಿದ್ದಾರೆ. ರೈತರು ಸ್ವತಃ ಕ್ರಿಮಿನಾಶಕಗಳನ್ನು ಬಳಕೆ ಮಾಡುತ್ತಾರೆ’ ಎಂದರು.

ADVERTISEMENT

‘ತೋಟಗಾರಿಕೆ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯ ಕುರಿತು ನಮ್ಮಲ್ಲಿ ಸಾಕಷ್ಟು ಮಾಹಿತಿಗಳು ದೊರೆಯುತ್ತವೆ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಶಿಲೀಂದ್ರ ನಾಶಕ ಬಳಕೆ ಮಾಡಿಕೊಳ್ಳುವುದರಿಂದ ರೋಗಗಳನ್ನು ತಡೆಗಟ್ಟಬಹುದಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.