ADVERTISEMENT

ಹೆಚ್ಚುವರಿ ಬೋಧನಾ ಕೊಠಡಿಗೆ ಮನವಿ

ಎಸ್ಎಸ್ಎಲ್‌ಸಿಯಲ್ಲಿ 218 ವಿದ್ಯಾರ್ಥಿಗಳಿಂದ ಕಲಿಕೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:40 IST
Last Updated 20 ಜುಲೈ 2019, 14:40 IST
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಿ ಲತಾ ಅವರಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ದೇವರಾಜಪ್ಪ ಹೆಚ್ಚುವರಿ ಕೊಠಡಿಗಳಿಗಾಗಿ ಮನವಿ ಸಲ್ಲಿಸಿದರು
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಿ ಲತಾ ಅವರಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ದೇವರಾಜಪ್ಪ ಹೆಚ್ಚುವರಿ ಕೊಠಡಿಗಳಿಗಾಗಿ ಮನವಿ ಸಲ್ಲಿಸಿದರು   

ವಿಜಯಪುರ: ‘ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ. ಎಸ್ಎಸ್ಎಲ್‌ಸಿಯಲ್ಲಿ 218 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರ ಕಲಿಕೆಗೆ ಅನುಕೂಲವಾಗಲು ಇನ್ನಷ್ಟು ಕೊಠಡಿಗಳನ್ನು ನಿರ್ಮಿಸುವ ಅಗತ್ಯವಿದೆ. ಹಾಗಾಗಿ ಈ ಬಗ್ಗೆ ಗಮನ ಹರಿಸಬೇಕು’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ದೇವರಾಜಪ್ಪ ಅವರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ (ಸಿಇಒ) ಲತಾ ಅವರಿಗೆ ಮನವಿ ಮಾಡಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮನವಿ ಸಲ್ಲಿಸಿ ಅವರು ಮಾತನಾಡಿದರು.

‘ಶಾಲೆಯಲ್ಲಿನ ವಿದ್ಯಾರ್ಥಿಗಳು ಕಳೆದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 85 ರಷ್ಟು ಫಲಿತಾಂಶ ಪಡೆದು, ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಲಿಕೆಗೆ ಪೂರಕ ವಾತಾವರಣ ಇಲ್ಲಿದೆ. ಉತ್ತಮ ಸಿಬ್ಬಂದಿ ವರ್ಗ ಇದ್ದಾರೆ. ಈಗ ಕಂಪ್ಯೂಟರ್ ಕಲಿಕಾ ಕೇಂದ್ರವನ್ನೂಪ್ರಾರಂಭಿಸಿದ್ದೇವೆ. ಆಟೋ ಬೆಲ್ ಕೊಠಡಿಯನ್ನೂ ಮಾಡಲಾಗಿದ್ದು, ಇವರೆಡೂ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನೆರವಾಗಲಿವೆ. ಇದಕ್ಕೆ ಪೂರಕ ಕೊಠಡಿಗಳ ಅಗತ್ಯವಿದೆ. ಕಂಪ್ಯೂಟರ್ ಕೊಠಡಿಯನ್ನು ಹವಾನಿಯಂತ್ರಿತ ಕೊಠಡಿಯನ್ನಾಗಿ ಮಾರ್ಪಡಿಸಬೇಕಿದ್ದು, ಇಲಾಖೆಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಉಪಪ್ರಾಂಶುಪಾಲ ಪಿ.ವೆಂಕಟೇಶ್ ಮಾತನಾಡಿ, ‘ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯವಿರುವ ಎಲ್ಲ ಕ್ರಿಯಾ ಯೋಜನೆಗಳನ್ನು ರೂಪಿಸಿದ್ದೇವೆ. ಖಾಸಗಿ ಶಾಲೆಗಳನ್ನು ಬಿಟ್ಟು, ಇಲ್ಲಿಗೆ ದಾಖಲಾಗಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಈ ಬಾರಿ ಶೇ 100 ರಷ್ಟು ಫಲಿತಾಂಶ ಪಡೆಯಬೇಕು ಎಂಬ ಸಂಕಲ್ಪ ನಮ್ಮದು. ಹಾಗಾಗಿ ಇಲಾಖೆಯಿಂದ ಅಗತ್ಯವಿರುವ ಸಹಕಾರ ನೀಡಬೇಕು’ ಎಂದರು.

ಸಿಇಒ ಲತಾ ಮಾತನಾಡಿ, ‘ಮಕ್ಕಳ ಶೈಕ್ಷಣಿಕ ಪ್ರಗತಿ ನಮ್ಮ ಮೂಲ ಉದ್ದೇಶ. ಕಲಿಕೆಗೆ ಯಾವುದೇ ಅಡ್ಡಿಯಾಗದಂತೆ ಗಮನ ವಹಿಸಬೇಕು. ಅಗತ್ಯವಿರುವ ಎಲ್ಲ ಸಹಕಾರ ನೀಡುತ್ತೇವೆ. ನೋಡಲ್ ಅಧಿಕಾರಿಗಳು ಸೇರಿದಂತೆ ಮೇಲ್ವಿಚಾರಕರು ನೀಡುವ ಎಲ್ಲಸಲಹೆ, ಸೂಚನೆಗಳನ್ನು ಅನುಸರಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಶೋಭಾ, ನೋಡಲ್ ಅಧಿಕಾರಿ ಡಾ.ಸುನೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.