ADVERTISEMENT

ಜಲಜೀವನ್‌ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 7:22 IST
Last Updated 11 ಜನವರಿ 2023, 7:22 IST
ಆನೇಕಲ್ ತಾಲ್ಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ. ಗೊಲ್ಲಹಳ್ಳಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಶಾಸಕ ಬಿ. ಶಿವಣ್ಣ ಭೂಮಿಪೂಜೆ ನೆರವೇರಿಸಿದರು
ಆನೇಕಲ್ ತಾಲ್ಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ. ಗೊಲ್ಲಹಳ್ಳಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಶಾಸಕ ಬಿ. ಶಿವಣ್ಣ ಭೂಮಿಪೂಜೆ ನೆರವೇರಿಸಿದರು   

ಆನೇಕಲ್: ತಾಲ್ಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ. ಗೊಲ್ಲಹಳ್ಳಿಯಲ್ಲಿ ಜಲಜೀವನ್‌ ಮಿಷನ್‌ನಡಿ ₹ 45.12 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ಬಿ. ಶಿವಣ್ಣ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ತಾಲ್ಲೂಕಿಗೆ ಯಾವುದೇ ಜಲಮೂಲಗಳಿಲ್ಲ. ಅಂತರ್ಜಲ ನಂಬಿ ಈ ಭಾಗದ ಜನತೆ ಜೀವನ ನಡೆಸುತ್ತಿದ್ದಾರೆ. ಹಾಗಾಗಿ, ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳು ಕಾರ್ಯಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಜಲಜೀವನ್‌ ಮಿಷನ್‌ನಿಂದ ಮನೆ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅನುಕೂಲವಾಗಲಿದೆ ಎಂದರು.

ತಾಲ್ಲೂಕಿನಲ್ಲಿ ಜಲಮೂಲಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಅಂತರ್ಜಲ ಕುಸಿತದಿಂದ ಈ ಭಾಗದ ರೈತರು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಿದೆ. ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬುವ ಯೋಜನೆ ರೂಪಿಸಲಾಗಿದೆ. ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಜಲಮೂಲಗಳು ಸಂರಕ್ಷಣೆಯಾಗಲಿವೆ ಎಂದು ತಿಳಿಸಿದರು.

ADVERTISEMENT

ವಣಕನಹಳ್ಳಿ ಗಡಿ ಗ್ರಾಮ ಪಂಚಾಯಿತಿಯಾಗಿದೆ. ಈ ಭಾಗದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ದ್ವಿಪಥ ರಸ್ತೆ ನಿರ್ಮಾಣದಿಂದ ಮುಖ್ಯರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಭಿವೃದ್ಧಿ ಮೂಲಕ ಮತದಾರರ ಋಣ ತೀರಿಸಬೇಕಾದುದ್ದು ಜನಪ್ರತಿನಿಧಿಗಳ ಜವಾಬ್ದಾರಿ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್‌. ಶ್ರೀನಿವಾಸ್‌ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ಜಲಜೀವನ್‌ ಮಿಷನ್‌ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಗ್ರಾಮದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ, ಮನೆ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ನಳ ಸಂಪರ್ಕ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದರು.

ಪಂಚಾಯಿತಿ ಉಪಾಧ್ಯಕ್ಷೆ ಸವಿತಾ ಸನತ್‌ಕುಮಾರ್‌, ಸದಸ್ಯರಾದ ಆರ್‌. ದೇವರಾಜು, ತಿಮ್ಮಕ್ಕ, ಗಿರೀಶ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ ಗೌಡ, ಮುಖಂಡರಾದ ಚೂಡೇನಹಳ್ಳಿ ಗೋಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.