ADVERTISEMENT

ಅಶೋಕ್ ಸಾವಿನ ಪ್ರಕರಣಕ್ಕೆ ಹೊಸ ತಿರುವು: ಕೊಲೆ ಶಂಕೆ

ಮೃತನ ಪತ್ನಿ, ಇಬ್ಬರು ಸ್ನೇಹಿತರು ಪೊಲೀಸ್‌ ವಶಕ್ಕೆ * ವಿಚಾರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 5:37 IST
Last Updated 29 ಜನವರಿ 2026, 5:37 IST
<div class="paragraphs"><p>ಕೊಲೆಯಾದ ಅಶೋಕ್&nbsp;</p></div>

ಕೊಲೆಯಾದ ಅಶೋಕ್ 

   

ಸೂಲಿಬೆಲೆ(ಹೊಸಕೋಟೆ): ವಾರದ ಹಿಂದೆ ತಮರಸನಹಳ್ಳಿ ಬಳಿ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೃತ ವ್ಯಕ್ತಿಯ ಪತ್ನಿ ಹಾಗೂ ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

ಜ.22ರಂದು ತಮರಸನಹಳ್ಳಿಗೆ ಹೋಗುವ ರಸ್ತೆಯ ತೋಟದ ಬಳಿಯ ತಿರುವಿನಲ್ಲಿ ಬಳಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ಬೈಕ್‌ ಹಾಗೂ ಪಕ್ಕದಲ್ಲಿ ಸಿದ್ದೇನಹಳ್ಳಿ ಅಶೋಕ್ (35) ಮೃತದೇಹ ಪತ್ತೆಯಾಗಿತ್ತು. 

ಆ ಮಾರ್ಗದಲ್ಲಿ ಬಂದ ಗ್ರಾಮಸ್ಥರು ಮಧ್ಯ ರಾತ್ರಿ ಸೂಲಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ್ದ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಗ್ರಾಮಸ್ಥರನ್ನು ಕೋರಿದ್ದರು.

ಸ್ಥಳಕ್ಕೆ ತೆರಳಿದ್ದ ಗ್ರಾಮದ ಯುವಕರ ಗುಂಪು ಮೃತ ವ್ಯಕ್ತಿ ಸಿದ್ದೇನಹಳ್ಳಿಯ ಅಶೋಕ್ ಎಂದು ಗುರುತಿಸಿದ್ದರು. ತನ್ನ  ಪತಿ ಸಾವಿನ ಬಗ್ಗೆ ಶಂಕೆ ಇದೆ ಎಂದು ಮೃತನ ಪತ್ನಿ ಪುಷ್ಪಾ ಮರುದಿನ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಅಪಘಾತ ಸ್ಥಳ ಪರಿಶೀಲಿಸಿದ್ದ ಗ್ರಾಮದ ಯುವಕರು ಇದು ಅಪಘಾತದ ರೀತಿ ಕಾಣುತ್ತಿಲ್ಲ. ಯಾರೋ ಹತ್ಯೆ ಮಾಡಿ ಅಪಘಾತ ಎಂದು ಬಿಂಬಿಸುವಂತೆ ಅನ್ನಿಸುತ್ತಿದೆ ಎಂದು ಪೊಲೀಸರ ಮುಂದೆ ಶಂಕೆ ವ್ಯಕ್ತಪಡಿಸಿದ್ದರು. ಶವವನ್ನು ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಅಪಘಾತದ ಬಗ್ಗೆ ಶಂಕೆ ಹೊಂದಿದ್ದ ಗ್ರಾಮಸ್ಥರು ಸಿದ್ದೇನಹಳ್ಳಿ ಕೆರೆ ಬಳಿ ಹುಡುಕಾಡಿದಾಗ ಪೊದೆಯ ಬಳಿ ಪಾರ್ಟಿ ಮಾಡಿದ ಗುರುತಾಗಿ ಮದ್ಯದ ಬಾಟಲಿಗಳು ಪತ್ತೆಯಾದವು. ರಕ್ತದ ಕಲೆ  ಮತ್ತು ಅದರ ಮೇಲೆ ಮಣ್ಣು ಮುಚ್ಚಿ ಕಲ್ಲು ಇಟ್ಟಿರುವುದನ್ನುಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳ ಮಹಜರು ನಡೆಸಿದ ಪೊಲೀಸರು ರಕ್ತದ ಕಲೆಯ ಕಲ್ಲು, ಮದ್ಯದ ಬಾಟಲಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದು, ನಿರ್ಬಂಧಿತ ಸ್ಥಳ ಗುರುತು ಮಾಡಲಾಗಿತ್ತು.

ಜ.22ರಂದು ರಾತ್ರಿ ಅಶೋಕ್‌ ಅವರನ್ನು ಸ್ನೇಹಿತರಾದ ದೇವರಾಜ್‌ ಮತ್ತು ಮುನೀಂದ್ರ ಪಾರ್ಟಿಗೆ ಕರೆದೊಯ್ದಿದ್ದರು ಎಂಬ ಮಾಹಿತಿ ದೊರೆಯುತ್ತಲೇ ಪೊಲೀಸರು ಆವರನ್ನು ತಂದು ವಿಚಾರಣೆ ನಡೆಸಿದ್ದಾರೆ. ಅಂದು ರಾತ್ರಿ ಸಿದ್ದೇನಹಳ್ಳಿಯ ಕೆರೆ ದಂಡೆ ಬಳಿ ಮೂವರು ಮದ್ಯದ ಪಾರ್ಟಿ ಮಾಡಿದ್ದರು ಎಂದು ತಿಳಿದು ಬಂದಿದೆ.  

ಅಶೋಕ್‌ಗೆ ಮದ್ಯ ಕುಡಿಸಿ ಕೊಲೆ ಮಾಡಿರಬಹುದು ನಂತರ ಬೈಕ್‌ ಅಪಘಾತದಂತೆ ಬಿಂಬಿಸಲು ಯತ್ನಿಸಲಾಗಿದೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಈ  ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ನಡುವೆ ತನ್ನ ಪತಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ ಮೃತ ಅಶೋಕ್‌ ಪತ್ನಿ ಪುಷ್ಪಾ ಅವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ. 

ಅನುಮಾನಾಸ್ಪದ ರೀತಿಯಲ್ಲಿ ಮೃತ ಅಶೋಕ್ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.