ADVERTISEMENT

ಘನತ್ಯಾಜ್ಯ ಘಟಕದ ಜಮೀನು ಕಬಳಿಕೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 9:22 IST
Last Updated 26 ಆಗಸ್ಟ್ 2021, 9:22 IST
ವಿಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಿಲ್ಲಾಧಿಕಾರಿ ಮಾಡಿರುವ ಆದೇಶದ ಪ್ರತಿ
ವಿಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಿಲ್ಲಾಧಿಕಾರಿ ಮಾಡಿರುವ ಆದೇಶದ ಪ್ರತಿ   

ವಿಜಯಪುರ: ಹೋಬಳಿಯ ಹಾರೋಹಳ್ಳಿಯ ಸರ್ವೆ ನಂ. 69ರ ಸರ್ಕಾರಿ ಭೂಮಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಕಾರ್ಯಾಲಯದಿಂದ 20 ಗುಂಟೆ ಭೂಮಿ ಮಂಜೂರಾಗಿದೆ. ಆದರೆ, 6 ಎಕರೆ, 9 ಗುಂಟೆ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಇಲ್ಲಿ ನಿರ್ಮಿಸಬೇಕಿರುವ ಘಟಕವನ್ನು ಜನರಿಗೆ ನಿವೇಶನ ಹಂಚಿಕೆ ಮಾಡುವ ಸರ್ವೆ ನಂ. 73ರಲ್ಲಿ ಮಾಡಲಾಗುತ್ತಿದೆ ಎಂದು ಗ್ರಾಮದ ಮುಖಂಡ ಎಚ್.ಎಂ. ಭೈರೇಗೌಡ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ಗುಂಟೆ ಜಮೀನು ಸರ್ಕಾರಿ ಗೋಮಾಳವಾಗಿದೆ. ಹಾಲಿ ಪಹಣಿಯಂತೆ 4 ಎಕರೆ 28 ಗುಂಟೆ ಜಮೀನು ದರಖಾಸ್ತು ಮೂಲವಾಗಿದೆ. ಉಳಿಕೆ ಜಮೀನು 6 ಎಕರೆ, 9 ಗುಂಟೆ ಇದೆ. ಇದರಲ್ಲಿ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಜೂರು ಮಾಡಲು ತಾಲ್ಲೂಕು ಮೋಜಿಣಿದಾರರು ನಕ್ಷೆ ತಯಾರಿಸಿದ್ದಾರೆ ಎಂದರು.

ಈ ಜಮೀನಿನಲ್ಲಿ ಬೆಲೆ ಬಾಳುವ ಮರಗಳು, ಕಟ್ಟಡಗಳು ಇರುವುದಿಲ್ಲ. ಈ ಜಮೀನಿನ ಬಗ್ಗೆ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಹಸಿರು ವಲಯಕ್ಕೆ ಸೇರಿದೆ. ಗ್ರಾಮಸ್ಥರು ಕೂಡ ಮಹಜರ್‌ಗೆ ಒಪ್ಪಿದ್ದಾರೆ. ಆದ್ದರಿಂದ ಮಂಜೂರು ಮಾಡಲಾಗಿದೆಯೆಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.

ADVERTISEMENT

ಮೊದಲು ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಗುರ್ತಿಸಿದ್ದ ಭೂಮಿಯಲ್ಲಿ 30 ಅಡಿಯಷ್ಟು ಹಳ್ಳವಿದೆ. ಅದನ್ನು ಮುಚ್ಚಲು ₹ 10 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಬೇಕಾಗಿದೆ. ಇದೇ ಸರ್ವೆ ನಂಬರ್‌ನಲ್ಲಿನ ಸಮತಟ್ಟು ಭೂಮಿಯನ್ನು ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದರು.

ಸರ್ವೆ ನಂ. 73ರಲ್ಲಿನ ಭೂಮಿಯನ್ನು ನಿವೇಶನ ಮಂಜೂರು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಹೋರಾಟ ಮಾಡುತ್ತಿದ್ದಾರೆ. ಶಾಸಕರು ಕೂಡ ನಿವೇಶನ ಮಾಡಲು ಶಿಫಾರಸು ಮಾಡಿದ್ದಾರೆ. ಆದರೆ, ಕೆಲವರು ಸರ್ವೆ ನಂ. 69ರಲ್ಲಿನ ಸಮತಟ್ಟು ಭೂಮಿಯನ್ನು ಕಬಳಿಸುವ ಹುನ್ನಾರದಿಂದ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸರ್ವೆ ನಂ. 73ರಲ್ಲಿ ಮಾಡುತ್ತಿದ್ದಾರೆ ಎಂದು ದೂರಿದರು.

ನಿವೇಶನ ಹಂಚಿಕೆ ಮಾಡಿ ಮನೆ ನಿರ್ಮಾಣ ಮಾಡಿಕೊಳ್ಳುವ ಬಡವರು ಈ ಘಟಕದಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಧಿಕಾರಿ ಆದೇಶದಂತೆ ನಿಗದಿತ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಬೇಕು. 73ರಲ್ಲಿ ಬಡವರಿಗೆ ನಿವೇಶನ ಮಂಜೂರು ಮಾಡಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.