ADVERTISEMENT

ಆವತಿ ಬೆಟ್ಟ ಅಭಿವೃದ್ಧಿ ಮರೀಚಿಕೆ ?

ಕೆಂಪೇಗೌಡರ ವಂಶಸ್ಥ ನಾಡಪ್ರಭು ರಣಭೈರೇಗೌಡರ ಕರ್ಮಭೂಮಿ

ವಡ್ಡನಹಳ್ಳಿ ಬೊಜ್ಯನಾಯ್ಕ
Published 25 ಜೂನ್ 2019, 18:30 IST
Last Updated 25 ಜೂನ್ 2019, 18:30 IST
ನಾಡಪ್ರಭು ರಣಭೈರೇಗೌಡರ ಕರ್ಮಭೂಮಿ ಆವತಿ ಬೆಟ್ಟ
ನಾಡಪ್ರಭು ರಣಭೈರೇಗೌಡರ ಕರ್ಮಭೂಮಿ ಆವತಿ ಬೆಟ್ಟ   

ದೇವನಹಳ್ಳಿ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ವಂಶಸ್ಥ ನಾಡಪ್ರಭು ರಣಭೈರೇಗೌಡರ ಕರ್ಮಭೂಮಿ ಆವತಿ ಬೆಟ್ಟ ಇದುವರೆಗೂ ಅಭಿವೃದ್ಧಿ ಕಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2014ರ ಡಿಸೆಂಬರ್‌ನಲ್ಲಿ ಕೆಂಪೇಗೌಡರ ಕಾಲದ ಐತಿಹಾಸಿಕ ಕುರುಹು ಹೊಂದಿರುವ ಸ.ನಂ.211ರ 44.07 ಎಕರೆ ವಿಸ್ತೀರ್ಣ ಬೆಟ್ಟದ ಪೈಕಿ 32ಎಕರೆ ಖಾಸಗಿ ವೈದ್ಯಕೀಯ ಕಾಲೇಜು ಆರಂಭಕ್ಕೆ 99 ವರ್ಷ ಗುತ್ತಿಗೆ ನೀಡಲು ಸರ್ಕಾರ ಮುಂದಾಗಿತ್ತು. ಇದರ ಸುಳಿವು ಅರಿತ ಸ್ಥಳೀಯರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು.

ರಾಷ್ಟ್ರಮಟ್ಟದಲ್ಲಿ ಪ್ರತಿರೋಧದ ಸುದ್ಧಿ ಪ್ರಕಟವಾದ ನಂತರ ಒಕ್ಕಲಿಗ ಸಮುದಾಯದ ಮುಖಂಡರು, ಮಠಾಧೀಶರು, ಪ್ರಗತಿಪರ ಸಂಘಟನೆಗಳು ಹೋರಾಟ ನಡೆಸಿದ್ದರು. ಎಚ್ಚೆತ್ತ ಕೇಂದ್ರ ಸರ್ಕಾರ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಸಂರಕ್ಷಣಾ ಇಲಾಖೆಯ ತಂಡ ಇಡೀ ಬೆಟ್ಟದಲ್ಲಿರುವ ಕುರುಹುಗಳನ್ನು ಸಂಗ್ರಹಿಸಿ ಸಮಗ್ರ ಪರಿಶೀಲನೆ ನಡೆಸಿ ವರದಿಯನ್ನು ಸರ್ಕಾರಕ್ಕೆ ನೀಡಿತ್ತು.

ADVERTISEMENT

ವರದಿ ಅನ್ವಯ ರಣಭೈರೇಗೌಡರ ಇತಿಹಾಸ ಕುರಿತ ಅನೇಕ ಕುರುಹುಗಳು ಬೆಳಕಿಗೆ ಬಂದಿತ್ತು‌. ಇದನ್ನು ಅರಿತ ರಾಜ್ಯ ಸರ್ಕಾರ ಆವತಿ ರಣಭೈರೇಗೌಡರ ಕರ್ಮ ಭೂಮಿ ಅಭಿವೃದ್ಧಿಪಡಿಸಿ ಕೆಂಪೇಗೌಡರ ಇತಿಹಾಸ ವಿಶ್ವಮಾನ್ಯವಾಗುವಂತೆ ಮಾಡುವುದಾಗಿ ತಿಳಿಸಿತ್ತು. ಅಂದಿನಿಂದ ಸರ್ಕಾರವಾಗಲಿ, ಸಂಬಂಧಪಟ್ಟ ಇಲಾಖೆಯಾಗಲಿ ಇತ್ತ ತಿರುಗಿಯೂ ನೋಡಿಲ್ಲ ಎಂಬುದು ಸ್ಥಳೀಯರ ಆರೋಪ.

ಸರ್ಕಾರ ಜೂನ್‌ 27ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಘೋಷಣೆ ಮಾಡಿ ಜಿಲ್ಲಾ ಮಟ್ಟದಲ್ಲಿ ಆಚರಣೆ ನಡೆಸಿದ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಭೈರೇಗೌಡ ಆವತಿ ಗ್ರಾಮದಿಂದ ಕೆಂಪೇಗೌಡ ಜ್ಯೋತಿ ಜಾಥಕ್ಕೆ ಚಾಲನೆ ನೀಡಿ ರಣಭೈರೇಗೌಡ ಕರ್ಮಭೂಮಿಯನ್ನು ₹1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು. ಆ ಸಂದರ್ಭದಲ್ಲಿ ಸಂಸದರಾಗಿದ್ದ ಎಂ.ವೀರಪ್ಪ ಮೊಯಿಲಿ, ದೇವನಹಳ್ಳಿ ಟಿಪ್ಪು ಜನ್ಮಸ್ಥಳ ಮತ್ತು ಆವತಿ ರಣ ಭೈರೇಗೌಡ ಕರ್ಮಭೂಮಿಯಲ್ಲಿ ಕೆಂಪೇಗೌಡರ ವಂಶಸ್ಥರ ನೆನಪಿಗಾಗಿ ವಸ್ತು ಸಂಗ್ರಹಾಲಯ ಆರಂಭಿಸಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದೆಂದು ಆಶ್ವಾಸನೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ ಎನ್ನುತ್ತಾರೆ ರಣಭೈರೇಗೌಡ ಹಿರತಕ್ಷಣಾ ಸಮಿತಿ ಸದಸ್ಯರು.

ಚರಿತ್ರೆ ಪುಟದಲ್ಲಿರುವ ಆವತಿ ಗ್ರಾಮ ರಣಭೈರೇಗೌಡ ಕಟ್ಟಿದ ಸಂಸ್ಥಾನ. ರಣಭೈರೇಗೌಡರ ಪುತ್ರಿ ವೀರಕೆಂಪಮ್ಮ ಗ್ರಾಮಸ್ಥರ ಒಳಿತಿಗಾಗಿ ಪ್ರಾಣತ್ಯಾಗ ಮಾಡಿದ ಸ್ಥಳ ಬೆಟ್ಟದಲ್ಲಿದೆ. ಇದುವರೆಗೂ ಅಭಿವೃದ್ಧಿಯಾಗಿಲ್ಲ. ಸ್ಥಳೀಯ ಹಿತರಕ್ಷಣ ಸಮಿತಿ ಸದಸ್ಯರು ಬೆಟ್ಟಕ್ಕೆ ಕಾಲುದಾರಿ ಮಾಡಿದ್ದಾರೆ. ವಿಶೇಷವೆಂದರೆ ಬೆಟ್ಟದ ಪೂರ್ವ –ಪಶ್ಚಿಮ, ಉತ್ತರಾಭಿಮುಖವಾಗಿ ಮೂರು ದಿಕ್ಕಿನಲ್ಲಿ ಆಂಜನೇಯ ದೇವಸ್ಥಾನಗಳಿವೆ.

ಬೆಟ್ಟದ ಮೇಲೆ ರಣಭೈರೇಗೌಡ ವಾಸವಿದ್ದ ಮನೆ ಕುರುಹುಗಳು ಇವೆ. ಮುದ್ದೆಬಂಡೆ ಸೇರಿದಂತೆ ಅನೇಕ ಜೀವ ವೈವಿಧ್ಯಮ ಸಸ್ಯ ಸಂಕುಲಗಳಿವೆ. ಪ್ರವಾಸೋದ್ಯಮಕ್ಕೆ ಅರ್ಹವಾಗಿರುವ ಇತಿಹಾಸದ ಕುರುಹು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಈ ಬೆಟ್ಟವನ್ನು ಅಭಿವೃದ್ಧಿಪಡಿಸಬೇಕು ಎಂದು ವೀರಕೆಂಪಮ್ಮ ಅಭಿವೃದ್ಧಿ ಸಮಿತಿ ಸದಸ್ಯರ ಒತ್ತಾಯವಾಗಿದೆ.

ಬೆಟ್ಟ ಉಳಿಸಿ ಐತಿಹಾಸಿಕ ಸ್ಥಳ ರಕ್ಷಿಸಿ ಹೋರಾಟದಲ್ಲಿ ರಾಜ್ಯ ಒಕ್ಕಲಿಗರ ಸಂಘ ಮತ್ತು ವಿಶ್ವ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ನಂತರದ ದಿನಗಳಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಅಲ್ಲದೆ, ಸ್ಥಳೀಯ ಕೆಲ ಒಕ್ಕಲಿಗ ಮುಖಂಡರಿಗೆ ಆಸಕ್ತಿ ಇಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.