ADVERTISEMENT

‘ತಂಬಾಕು ಸೇವನೆಯಿಂದ ದೂರವಿರಿ‘

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 13:19 IST
Last Updated 2 ಆಗಸ್ಟ್ 2019, 13:19 IST
ಕಾರ್ಯಾಗಾರದಲ್ಲಿ ಮಾತನಾಡಿದ ಡಾ.ಧರ್ಮೇಂದ್ರ
ಕಾರ್ಯಾಗಾರದಲ್ಲಿ ಮಾತನಾಡಿದ ಡಾ.ಧರ್ಮೇಂದ್ರ   

ದೇವನಹಳ್ಳಿ: ತಂಬಾಕು ಭರಿತ ವಸ್ತುಗಳಲ್ಲಿ ಏಳು ಸಾವಿರ ರಾಸಾಯನಿಕ ವಸ್ತುಗಳಿದ್ದು ಶೇಕಡ 69ರಷ್ಟು ಕ್ಯಾನ್ಸರ್‌ಕಾರಕ ರೂಪದಲ್ಲಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಧರ್ಮೇಂದ್ರ ಹೇಳಿದರು.

ಇಲ್ಲಿನ ತಾಲ್ಲೂಕು ಆರೋಗ್ಯ ಇಲಾಖೆಯಲ್ಲಿ ತಂಬಾಕು ನಿಯಂತ್ರಣ ಕುರಿತು ಆರೋಗ್ಯ ಸಹಾಯಕರಿಗೆ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ವಾರ್ಷಿಕ 60ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಮರಣ ಹೊಂದುತ್ತಿದ್ದಾರೆ. ಪ್ರತಿ 6 ಸೆಕೆಂಡಿಗೆ ಒಬ್ಬ ತಂಬಾಕು ಉತ್ಪನ್ನ ಸೇವನೆಯಿಂದ ಮರಣ ಹೊಂದುತ್ತಾರೆ. ದೇಶದಲ್ಲಿ ಶೇಕಡ 26.4ರಷ್ಟು ಧೂಮಪಾನಿಗಳಿದ್ದಾರೆ. ತಂಬಾಕುವಿನಲ್ಲಿರುವ ನಿಕೋಟಿನ್ ಎಂಬ ವಸ್ತು ಚಟಕ್ಕೆ ದಾಸನಾಗಲು ಪ್ರಚೋದಿಸುತ್ತದೆ ಎಂದು ಹೇಳಿದರು.

ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಕಾಯಿಲೆ, ಮಹಿಳೆಯರಲ್ಲಿ ಗರ್ಭಕೋಶದ ತೊಂದರೆ, ಗ್ಯಾಂಗ್ರಿನ್ ಸೇರಿದಂತೆ ಅನೇಕ ಮಾರಕ ರೋಗಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದರು.

ADVERTISEMENT

2011ರ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ₹983 ಕೋಟಿಯನ್ನು ತಂಬಾಕು ಸೇವನೆಯಿಂದ ಉಂಟಾದ ಮಾರಕ ರೋಗಿಗಳಿಗೆ ವೆಚ್ಚ ಮಾಡಿದೆ ಎಂದು ತಿಳಿಸಿದರು.

ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರರಾದ ಡಾ.ವಿದ್ಯಾರಾಣಿ ಮಾತನಾಡಿ, '2003ರ ಕೋಟ್ಬಾಕಾಯ್ದೆ ಅನ್ವಯ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧವಿದೆ. ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಉತ್ತೇಜನ ನೀಡುವ ಜಾಹೀರಾತು ಮತ್ತು ಪ್ರಾಯೋಜಕತೆಗೆ ನಿಷೇಧವಿದೆ. ತಂಬಾಕು ಉತ್ಪನ್ನಗಳು 18 ವರ್ಷದೊಳಗಿನವರಿಗೆ ಸಿಗದಂತೆ ನಿಯಂತ್ರಣ ಮಾಡಬೇಕು. ಸಿಗರೇಟ್ ಸೇದುವ ಒಬ್ಬ ವ್ಯಕ್ತಿಯಿಂದ ಅವರ ಸುತ್ತ ಇರುವ ಜನರಿಗೂ ಆರೋಗ್ಯ ಸಮಸ್ಯೆ ಉಂಟಾಗಲಿದೆ ಎಂದು ಹೇಳಿದರು.

‌ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೇವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.