ADVERTISEMENT

ತಂಬಾಕು ವಿರುದ್ಧ ಜಾಗೃತಿ

ವಿದ್ಯಾರ್ಥಿಗಳಿಂದ ಗುಲಾಬಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 4:38 IST
Last Updated 25 ಫೆಬ್ರುವರಿ 2021, 4:38 IST
ಧೂಮಪಾನದಿಂದಾಗುವ ದುಷ್ಪರಿಣಾಮ ಕುರಿತು ಗುಲಾಬಿ ಆಂದೋಲನ ನಡೆಯಿತು
ಧೂಮಪಾನದಿಂದಾಗುವ ದುಷ್ಪರಿಣಾಮ ಕುರಿತು ಗುಲಾಬಿ ಆಂದೋಲನ ನಡೆಯಿತು   

ದೊಡ್ಡಬಳ್ಳಾಪುರ:ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ಕುರಿತು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜನಜಾಗೃತಿ ಮೂಡಿಸುವ ಸಲುವಾಗಿ ನಗರದ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢಶಾಲೆ ಬಳಿಯಿಂದ ಗುಲಾಬಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತಂತೆ ಭಿತ್ತಿಪತ್ರಗಳ ಪ್ರದರ್ಶನವಿತ್ತು. ತಂಬಾಕು ಮಾರಾಟ ಮಾಡದಂತೆ ಅಂಗಡಿಯವರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಲಾಯಿತು.

ಆಂದೋಲನಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಮಾತನಾಡಿ, ತಂಬಾಕು ಸೇವನೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಹಾಗೂ ಮಾರಾಟ ಮಾಡುವುದಕ್ಕೆ ನಿರ್ಬಂಧವಿದೆ, ಕೋಟ್ಪಾ ಕಾಯ್ದೆ-2003 ಕುರಿತ ಅರಿವಿರಬೇಕು ಎಂದರು.

ADVERTISEMENT

ಅಪ್ರಾಪ್ತ ವಯಸ್ಕರಿಗೆ ಮತ್ತು ಅವರಿಂದ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದೆ. ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಅಡಿ ಅಂತರದ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳಲ್ಲಿ ಚಿತ್ರಸಹಿತ ಆರೋಗ್ಯ ಎಚ್ಚರಿಕೆ ಹಾಗೂ ಎಚ್ಚರಿಕೆ ಪ್ರಕಟಣೆಯು ಸ್ಫುಟವಾಗಿ, ಪ್ರಮುಖವಾಗಿ ಮತ್ತು ಕಾಣುವಂತೆ ಸ್ಪಷ್ಟವಾದ ಗಾತ್ರ, ಬಣ್ಣ ಮತ್ತು ಶೈಲಿಯಲ್ಲಿಬೇಕು. ಇದನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಬಹುದಾಗಿದೆ. ಈ ಕುರಿತು ಜಾಗೃತಿ ಮೂಡಿಸಲು ಗುಲಾಬಿ ಆಂದೋಲನ ಅಂಗವಾಗಿ ಜಾಥಾ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ನಗರ ಸರ್ಕಾರಿ ಆಸ್ಪತ್ರೆಯ ಡಾ.ವಸುಧಾ, ಮುಖ್ಯಶಿಕ್ಷಕಿ ತಿಪ್ಪಮ್ಮ, ಆಪ್ತ ಸಮಾಲೋಚಕಿ ಪದ್ಮಾ, ಹಿರಿಯ ಆರೋಗ್ಯ ಸಹಾಯಕ ಟಿ.ಕೆ. ಕರಿಯಪ್ಪ, ಹಿರಿಯ ಮಹಿಳಾ ಆಪ್ತ ಸಹಾಯಕಿಯರಾದ ಕೆ.ಎನ್. ವೀಣಾ, ಮಂಜುಳಾ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.