ADVERTISEMENT

ಕುಟುಂಬ ನಿರ್ವಹಣೆಗೆ ಆಧಾರವಾದ ಬಾಲ್ಯದಲ್ಲಿ ಕಲಿತಿರುವ ಕಲೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 15:31 IST
Last Updated 7 ಸೆಪ್ಟೆಂಬರ್ 2020, 15:31 IST
ವಿಜಯಪುರದ ಗುರಪ್ಪನಮಠದ ಬಳಿ ರತ್ನಮ್ಮ ಅವರು ವೈರ್‌ನಿಂದ ಬ್ಯಾಗ್‌ ಸಿದ್ಧಪಡಿಸುತ್ತಿರುವುದು
ವಿಜಯಪುರದ ಗುರಪ್ಪನಮಠದ ಬಳಿ ರತ್ನಮ್ಮ ಅವರು ವೈರ್‌ನಿಂದ ಬ್ಯಾಗ್‌ ಸಿದ್ಧಪಡಿಸುತ್ತಿರುವುದು   

ವಿಜಯಪುರ: ಲಾಕ್ ಡೌನ್‌ ಸಂದರ್ಭಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ಒಪ್ಪೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾದಾಗ ಇಲ್ಲಿನ ಗುರಪ್ಪನಮಠದ ನಿವಾಸಿಯೊಬ್ಬರು ವೈರ್ ಬ್ಯಾಗುಗಳೂ ಸೇರಿದಂತೆ ಅನೇಕ ಅಲಂಕಾರಿಕ ವಸ್ತುಗಳನ್ನು ನೇಯುವ ಕಾಯಕವನ್ನು ರೂಢಿಸಿಕೊಂಡು ಕುಟುಂಬ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ.

ಇಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿರುವ ರತ್ನಮ್ಮ ಅವರು ಈ ಕಾಯಕದಲ್ಲಿ ತೊಡಗಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ವ್ಯಾಪಾರ ಕಡಿಮೆ. ಅಂಗಡಿಯನ್ನೆ ನಂಬಿಕೊಂಡು ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಆದ್ದರಿಂದ ನಾನು ಚಿಕ್ಕ ವಯಸ್ಸಿನಲ್ಲಿ ಕಲಿತಿರುವ ವೈರ್ ಬ್ಯಾಗ್ ನೇಯುವುದು, ಮನೆಗೆ ಬೇಕಾಗಿರುವ ಅಲಂಕಾರಿಕ ಬಟ್ಟೆಗಳನ್ನು ಉಲ್ಲನ್ ದಾರದಲ್ಲಿ ನೇಯುವ ಕಲೆಯನ್ನು ಈಗ ಉಪಯೋಗ ಮಾಡಿಕೊಂಡು ಖಾಲಿಯಾಗಿರುವ ಸಮಯದಲ್ಲಿ ನೇಯುತ್ತೇನೆ. ಇದರಿಂದ ಸ್ವಲ್ಪಮಟ್ಟಿಗೆ ಕುಟುಂಬ ನಿರ್ವಹಣೆ ಮಾಡಿಕೊಳ್ಳಲೂ ಅನುಕೂಲವಾಗುತ್ತಿದೆ’ ಎಂದರು.

‘ಈ ಬ್ಯಾಗ್‌ ಮರುಬಳಕೆ ಮಾಡಿಕೊಳ್ಳಬಹುದು. ತೊಳೆಯಬಹುದು. ನಾವೆಲ್ಲಾ ಚಿಕ್ಕ ಮಕ್ಕಳಿರುವಾಗ ಇದೇ ಬ್ಯಾಗುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದರಿಂದ ಪ್ಲಾಸ್ಟಿಕ್ ಕವರ್‌ ಬಳಕೆ ಗೊತ್ತಿರಲಿಲ್ಲ. ಒಂದೊಂದು ಬ್ಯಾಗಿನಲ್ಲಿ 5 ಕೆ.ಜಿಯಷ್ಟು ತೂಕದ ಸಾಮಾನುಗಳನ್ನು ಕೊಂಡೊಯ್ಯಬಹುದಾಗಿದೆ. ದೊಡ್ಡಬ್ಯಾಗುಗಳನ್ನೂ ನೇಯಬಹುದು. ಇದರಿಂದ ಪ್ಲಾಸ್ಟಿಕ್ ಕವರುಗಳ ಬಳಕೆ ಮಾಡುವುದನ್ನು ನಿಯಂತ್ರಣ ಮಾಡುವುದರ ಜೊತೆಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲಿಕ್ಕೆ ಸಹಕಾರಿ’ ಎನ್ನುತ್ತಾರೆ ಅವರು.

ADVERTISEMENT

‘ಒಂದು ಬ್ಯಾಗ್‌ ತಯಾರಿಸಲು 3 ಬಂಡಲ್ ವೈರ್ ಬೇಕಾಗುತ್ತದೆ. ಕಚ್ಚಾ ವಸ್ತುಗಳನ್ನೂ ಸ್ಥಳೀಯವಾಗಿ ಖರೀದಿ ಮಾಡಿಕೊಳ್ಳುತ್ತೇವೆ. ಒಂದೊಂದು ಬ್ಯಾಗನ್ನು ಗಾತ್ರಕ್ಕೆ ಅನುಗುಣವಾಗಿ ₹ 200 ರಿಂದ ₹ 350ವರೆಗೆ ಮಾರಾಟ ಮಾಡುತ್ತೇನೆ. ಕೆಲವರು ಮೊದಲೇ ಆರ್ಡರ್ ಕೊಟ್ಟು ಬ್ಯಾಗುಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ನನಗೆ ಕುಟುಂಬ ನಿರ್ವಹಣೆಗೂ ಅನುಕೂಲವಾಗಿದೆ’ ಎಂದು ರತ್ನಮ್ಮ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.