ADVERTISEMENT

ಬಮೂಲ್: 3 ವರ್ಷದಲ್ಲಿ ₹700 ಕೋಟಿ ಆದಾಯ

ಪ್ರತಿ ಲೀಟರ್ ನೀಡುತ್ತಿದ್ದ ₹5 ಪ್ರೋತ್ಸಾಹಧನಕ್ಕೆ ಹೆಚ್ಚುವರಿಯಾಗಿ ಒಂದು ರೂಪಾಯಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 13:22 IST
Last Updated 15 ಫೆಬ್ರುವರಿ 2019, 13:22 IST
ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು
ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು   

ದೇವನಹಳ್ಳಿ: ಬಮೂಲ್ ಒಕ್ಕೂಟದಲ್ಲಿ ಪ್ರಸ್ತುತ ₹700 ಕೋಟಿ ಆದಾಯದಲ್ಲಿ ಹಾಲು ಉತ್ಪಾದಕರಿಗೆ ಹಲವು ಪ್ರಗತಿದಾಯಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ. ನಾಗರಾಜಯ್ಯ ಹೇಳಿದರು.

ಇಲ್ಲಿನ ಹಾಲು ಒಕ್ಕೂಟ ಶಿಬಿರ ಕಚೇರಿಯ ಎರಡನೇ ಹಂತದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬಯಲುಸೀಮೆ ಜಿಲ್ಲೆಗಳಲ್ಲಿ ಆರಂಭಗೊಂಡ ಹಾಲು ಉತ್ಪಾದನಾ ಕೇಂದ್ರಗಳು ಮಂದಗತಿಯಲ್ಲಿ ಸಾಗುತ್ತಿದ್ದವು. 55 ವರ್ಷಗಳ ನಂತರ ಕ್ಷೀರ ಕ್ರಾಂತಿ ಶರವೇಗದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಅನೇಕ ಸಂಕಷ್ಟಗಳ ನಡುವೆ ಹಾಲು ಉತ್ಪಾದನೆಯಾಗುತ್ತಿದ್ದರೂ, ಬರಗಾಲದಲ್ಲಿ ತತ್ತರಿಸಿರುವ ಹಾಲು ಉತ್ಪಾದಕರಿಗೆ ಕುಡಿಯುವ ನೀರು, ಮೇವಿನ ಕೊರತೆ ಇದೆ. ಇದನ್ನು ಒಕ್ಕೂಟ ಗಂಭೀರವಾಗಿ ಪರಿಗಣಿಸಿ ಮಾರ್ಚ್‌ನಿಂದ ಪ್ರತಿ ಲೀಟರ್‌ಗೆ ₹26.33 ಪೈಸೆ, ಏಪ್ರಿಲ್‌ನಲ್ಲಿ ₹27.63 ಪೈಸೆ ನೀಡಲಾಗುತ್ತದೆ. ರಾಜ್ಯ ಸರ್ಕಾರ ಈ ಹಿಂದೆ ಪ್ರತಿ ಲೀಟರ್ ನೀಡುತ್ತಿದ್ದ ₹5 ಪ್ರೋತ್ಸಾಹಧನಕ್ಕೆ ಹೆಚ್ಚುವರಿಯಾಗಿ ಒಂದು ರೂಪಾಯಿ ನೀಡಲು ನಿರ್ಧರಿಸಿದ್ದು ಪ್ರತಿ ಲೀಟರ್‌ಗೆ ₹33 ಸಿಗಲಿದೆ ಎಂದು ಹೇಳಿದರು.

ADVERTISEMENT

ಹಾಲು ಉತ್ಪಾದಕರಿಗೆ ತರಬೇತಿ, ಪ್ರವಾಸ, ಪಶುಗಳಿಗೆ ಮ್ಯಾಟ್, ಮೇವು ಕತ್ತರಿಸುದ ಪರಿಕರ, ಹಾಲು ಹಿಂಡುವ ಯಂತ್ರ ಮೂಲ ಸೌಲಭ್ಯಕ್ಕಾಗಿ ವಾರ್ಷಿಕ ನೂರು ಕೋಟಿ ಒಕ್ಕೂಟದ ಅನುದಾನದಲ್ಲಿ ವೆಚ್ಚ ಮಾಡಲಾಗುತ್ತಿದೆ. 2,150 ಹಾಲು ಉತ್ಪಾದಕರ ಸಂಘಗಳ ಪೈಕಿ ಒಂದು ಸಾವಿರ ಸಂಘಗಳಿಗೆ ಸ್ವಂತ ಕಟ್ಟಡಗಳಿಲ್ಲ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟ ವತಿಯಿಂದ ಪ್ರಸ್ತುತ ₹3.5 ಲಕ್ಕ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಹೇಳಿದರು.

ಬಮೂಲ್ ನಿರ್ದೇಶಕ ಬಿ.ಶ್ರೀನಿವಾಸ್ ಮಾತನಾಡಿ, ಪ್ರಸ್ತುತ ₹98 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ತಾಲ್ಲೂಕಿನಲ್ಲಿ 182 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 15,872 ನೋಂದಾಯಿತ ಸದಸ್ಯರಿದ್ದಾರೆ. ಈ ಪೈಕಿ ಮಹಿಳಾ ಸದಸ್ಯರ ಸಂಖ್ಯೆ 4,191 ಇದೆ, ಹಾಲು ಸರಬರಾಜು ಮಾಡುತ್ತಿರುವ ಸದಸ್ಯರ ಸಂಖ್ಯೆ 10,259 ಇದೆ. 6 ಸಂಘಗಳು ಸ್ವಂತ ಕಟ್ಟಡ ಹೊಂದಿದರೆ ಶೇ 100 ರಷ್ಟು ಪೂರ್ಣಗೊಳ್ಳಲಿದೆ ಎಂದರು.

ಉತ್ಪಾದಕರ ಮೂಲ ಸೌಲಭ್ಯಕ್ಕಾಗಿ ತಾಲ್ಲೂಕಿನಲ್ಲಿ ವಾರ್ಷಿಕ ₹25 ಕೋಟಿ ವೆಚ್ಚ ಮಾಡಲಾಗಿದೆ. ಬಮೂಲ್ ಕಲ್ಯಾಣ ಟ್ರಸ್ಟ್‌ ವತಿಯಿಂದ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸದಸ್ಯರ ಅಕಾಲಿಕ ಮರಣ, ವಿಮಾ ಯೋಜನೆ, ವಿವಿಧ ಕಾರ್ಯಕ್ರಮಗಳಿಗೆ ₹60 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ ಚಿನ್ನಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣ್ ಗೌಡ ಮಾತನಾಡಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ.ಮಂಜುನಾಥ್, ರಾಧಮ್ಮ ಮುನಿರಾಜು, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಸಿ. ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಉಪಾಧ್ಯಕ್ಷ ಸುಧಾಕರ್, ಹಾಪ್‌ಕಾಮ್ಸ್‌ ಉಪಾಧ್ಯಕ್ಷ ಬಿ.ಮುನೇಗೌಡ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶ್ರೀರಾಮಯ್ಯ, ಉಪಾಧ್ಯಕ್ಷೆ ಭಾರತಿ, ನಿರ್ದೇಶಕ ಮಂಡಿಬೆಲೆ ರಾಜಣ್ಣ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಮುನೇಗೌಡ, ಬಮೂಲ್ ನಿರ್ದೇಶಕರಾದ ತಿಮ್ಮರಾಜು, ಬಿ.ಡಿ.ನಾಗಪ್ಪ, ಎಚ್.ಪಿ.ರಾಜಕುಮಾರ್, ಕೃಷ್ಣಯ್ಯ, ಮಾಜಿ ನಿರ್ದೇಶಕ ಸೋಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.