ಸಾಂದರ್ಭಿಕ ಚಿತ್ರ
ದೇವನಹಳ್ಳಿ: ಕೋಲ್ಕತ್ತಾದಿಂದ ಸೋಮವಾರ ರಾತ್ರಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪಶ್ಚಿಮ ಬಂಗಾಳದ ಯುವಕನೊಬ್ಬ ವಿಮಾನ ನಿಲ್ಲುವ ಮೊದಲೇ ತುರ್ತು ನಿರ್ಗಮನ ಬಾಗಿಲು ತೆಗೆಯಲು ಯತ್ನಿಸಿದ್ದಾನೆ.
ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಕೌಶಿಕ್ ಕರಣ್ (22) ಎಂಬ ಪ್ರಯಾಣಿಕನ ವಿರುದ್ಧ ಇಂಡಿಗೊ ವಿಮಾನಯಾನ ಸಂಸ್ಥೆಯು ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಐಪಿಸಿ ಸೆಕ್ಷನ್ 336 (ಇತರರ ಜೀವ, ವೈಯಕ್ತಿಕ ಸುರಕ್ಷತೆಗೆ ಅಪಾಯ ತಂದೊಡ್ಡುವ ಕೃತ್ಯ) ಅಡಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಮಾನದ ತುರ್ತು ನಿರ್ಗಮನ ಬಾಗಿಲು ಬಳಿಯ ಆಸನ ಸಂಖ್ಯೆ 18ರಲ್ಲಿ ಕುಳಿತಿದ್ದ ಕೌಶಿಕ್ ವಿಮಾನ ನಿಲ್ಲುವ ಮೊದಲೇ ಬಾಗಿಲು ತೆಗೆಯಲು ಯತ್ನಿಸುತ್ತಿರುವುದು ಕ್ಯಾಬಿನ್ ಸಿಬ್ಬಂದಿ ಗಮನಕ್ಕೆ ಬಂದಿದೆ. ತಕ್ಷಣ ಆತನನ್ನ ಭದ್ರತಾ ಸಿಬ್ಬಂದಿ ವಶಕ್ಕೆ ಒಪ್ಪಿಸಿದ್ದಾರೆ.
ಈ ಯುವಕ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವುದರಿಂದ ಗೊತ್ತಿಲ್ಲದೆ ಈ ಘಟನೆ ನಡೆದಿದೆ ಎಂಬ ವಿಷಯ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ.
ವಿಮಾನದಿಂದ ನಿರ್ಗಮಿಸುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಯುವಕನಿಗೆ ಗೊತ್ತಿರಲಿಲ್ಲ. ಉದ್ದೇಶಪೂರ್ವಕವಾಗಿ ಆತ ಈ ಕೃತ್ಯ ಎಸಗಿಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತಾನು ಕುಳಿತ ಆಸನದಿಂದ ಮೇಲೇಳುವಾಗ ಆತ ಮುಂದಿದ್ದ ತುರ್ತು ನಿರ್ಗಮನದ ಬಾಗಿಲು ಹಿಡಿದು ಕೊಂಡಿದ್ದಾನೆ. ಬೆಂಗಳೂರಿನಲ್ಲಿರುವ ಸಂಬಂಧಿಕರನ್ನು ಭೇಟಿ ಮಾಡಲು ಆತ ಕೋಲ್ಕತ್ತಾದಿಂದ ಬಂದಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
‘ಸಮನ್ಸ್ ಬಂದಾಗ ತನಿಖಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವಂತೆ ತಿಳಿಸಿ, ಆತನನ್ನು ಬಿಟ್ಟು ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.