ADVERTISEMENT

ಘಾಟಿ ಕ್ಷೇತ್ರ: ಜಾನುವಾರು ಸಂತೆ, ಪರಿಷೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 4:46 IST
Last Updated 2 ಡಿಸೆಂಬರ್ 2022, 4:46 IST

ದೊಡ್ಡಬಳ್ಳಾಪುರ: ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಜಾನುವಾರುಗಳ ಸಂತೆ, ಜಾತ್ರೆ, ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆರ್. ಲತಾ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಡಿ.20 ರಿಂದ ಆರಂಭಗೊಳ್ಳಬೇಕಿದ್ದ ಘಾಟಿ ಸುಬ್ರಹ್ಮಣ್ಯಸ್ವಾಮಿ ದನಗಳ ಜಾತ್ರೆ ಮುಂದೂಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2,037 ಜಾನುವಾರುಗಳಿಗೆ ಚರ್ಮಗಂಟು ರೋಗದ ಲಕ್ಷಣ ಕಂಡು ಬಂದಿದೆ. 154 ಜಾನುವಾರು ಮರಣ ಹೊಂದಿವೆ. ಜಿಲ್ಲೆಯಲ್ಲಿ ಒಟ್ಟು 1,62,980 ದನಗಳು ಮತ್ತು ಎಮ್ಮೆಗಳಿವೆ. ಮುಂಜಾಗ್ರತಾ ಕ್ರಮವಾಗಿ 1,51,526 ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗಿದೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಜಿಲ್ಲೆಯ ವಿವಿಧ ಕಡೇ ದನಗಳ ಜಾತ್ರೆ ನಡೆಯುತ್ತದೆ. ದನಗಳ ಸಾಗಾಣಿಕೆಯಿಂದ ದನಗಳು ಒಂದೆಡೆ ಸೇರುವುದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚು. ಚರ್ಮಗಂಟು ರೋಗ ನಿಯಂತ್ರಣ ಹಿನ್ನೆಲೆಯಲ್ಲಿ ಕರ್ನಾಟಕ ಅನಿಮಲ್ ಡಿಸ್ಸಿಸ್ 1961ರ ಕಾಯ್ದೆ ದನಗಳ ಜಾತ್ರೆಗೆ ನಿಷೇಧ ಮಾಡಲಾಗಿದೆ. ಚರ್ಮಗಂಟು ರೋಗವನ್ನು ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಜನವರಿ 30ವರೆಗೆ ಜಿಲ್ಲೆಯಲ್ಲಿ ಜಾನುವಾರುಗಳ ಜಾತ್ರೆ ಮತ್ತು ಜಾನವಾರುಗಳ ಸಾಗಾಣಿಕೆ ಮಾಡದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಡಿ. 20 ರಂದು ಈ ವರ್ಷದ ಘಾಟಿ ದನಗಳ ಜಾತ್ರೆಗೆ ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೆ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಜಾನುವಾರು ಜಾತ್ರೆ ನಡೆಸದಂತೆ ಆದೇಶವಿರುವುದರಿಂದ ಘಾಟಿಯ ದನಗಳ ಜಾತ್ರೆಯನ್ನು ಮುಂದೂಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.