
ಆನೇಕಲ್: ತಾಲ್ಲೂಕಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಡಹಳ್ಳಿ ಸಮೀಪ ಬಾಂಗ್ಲಾದೇಶದ ಕುಟುಂಬಗಳು ಅಕ್ರಮವಾಗಿ ವಾಸವಾಗಿವೆ ಎಂದು ಬಿಜೆಪಿ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಅಧಿಕಾರಿಗಳು ಸೋಮವಾರ ವಾಸಿಸುತ್ತಿದ್ದ ಗುಡಿಸಲುಗಳನ್ನು ತೆರವುಗೊಳಿಸಿದರು.
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಬಂದ ಕಂದಾಯ ಇಲಾಖೆ ಮತ್ತು ತಾಲ್ಲೂಕು ಮತ್ತು ಪಂಚಾಯಿತಿ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಗುಡಿಸಲುಗಳನ್ನು ಯಂತ್ರದಿಂದ ತೆರವುಗೊಳಿಸಿದರು.
ಇದರಿಂದ ವಿಚಲಿತರಾದ ಗುಡಿಸಲು ನಿವಾಸಿಗಳು ತಮ್ಮ ಅಸ್ತಿತ್ವ ಸಾಬೀತುಪಡಿಸುವ ಗುರುತಿನ ಚೀಟಿ, ದಾಖಲೆಗಳನ್ನು ನೀಡಲು ಒಂದು ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪಿದ ಅಧಿಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿ ಹಿಂದಿರುಗಿದರು. ಅಷ್ಟರಲ್ಲಿ ಆಗಲೇ ಪ್ಲಾಸ್ಟಿಕ್ ಹಾಗೂ ಬಟ್ಟೆಗಳಿಂದ ತಾತ್ಕಾಲಿಕ ಗೂಡುಗಳನ್ನು ಕಿತ್ತು ಹಾಕಲಾಗಿತ್ತು.
ಮೇಡಹಳ್ಳಿ ಸಮೀಪದ ಶೆಡ್‌ಗಳಲ್ಲಿ ಚಿಂದಿ, ಪೇಪರ್, ಪ್ಲಾಸ್ಟಿಕ್, ಕಬ್ಬಿಣ ಆಯುವ 50ಕ್ಕೂ ಹೆಚ್ಚು ಕುಟುಂಬಗಳು ಮಕ್ಕಳು, ಮರಿಗಳೊಂದಿಗೆ ವಾಸವಾಗಿವೆ. ಶೆಡ್‌ಗಳ ಮುಂದೆಯೇ ನೂರಾರು ಕೆ.ಜಿ ಪೇಪರ್, ಪ್ಲಾಸ್ಟಿಕ್ ಕಸದ ರಾಶಿ ಶೇಖರಿಸಿಟ್ಟುಕೊಂಡಿದ್ದಾರೆ.
ಪಶ್ವಿಮ ಬಂಗಾಳದಲ್ಲಿ ನೀಡಲಾದ ಆಧಾರ್ ಕಾರ್ಡ್ ಹೊಂದಿರುವ ಈ ಕುಟುಂಬಗಳು ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಲಿಲ್ಲ. ಮೂಲಸ್ಥಳದ ಬಗ್ಗೆ ನಿಖರ ಮಾಹಿತಿ ದೊರೆಯಲಿಲ್ಲ. ಒಂದು ದಿನ ಕಾಲಾವಕಾಶ ನೀಡಿ ತೆರವು ಕಾರ್ಯಚರಣೆ ಸ್ಥಗಿತಗೊಳಿಸಲಾಯಿತು.
ಮೇಡಹಳ್ಳಿ, ಹೀಲಲಿಗೆ, ಮರಸೂರು ಸೇರಿದಂತೆ ಹಲವೆಡೆ ಬಾಂಗ್ಲದೇಶದ ಕುಟುಂಬಗಳು ನೆಲೆಸಿವೆ ಎಂಬ ಮಾಹಿತಿ ಇದೆ. ಈ ಕುಟುಂಬಗಳ ಸಮಗ್ರ ದಾಖಲೆ ಪರಿಶೀಲಿಸಬೇಕು ಎಂದು ಬಿಜೆಪಿ ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಬಂದಿದ್ದ ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅಧಿಕಾರಿಗಳನ್ನು ಒತ್ತಾಯಿಸಿದ್ದರು.
‘ಭಾರತೀಯರಾದರೆ ತೊಂದರೆ ಇಲ್ಲ. ಬಾಂಗ್ಲಾದೇಶಿಯರಾದರೆ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ನೆಲೆಸಿರುವ ಹೊರ ದೇಶದವರ ಬಗ್ಗೆ ನಿಗಾ ವಹಿಸಬೇಕು’ ಎಂದರು.
ಕಳೆದ 15 ದಿನದಿಂದ ಮೇಡಹಳ್ಳಿ ಸುತ್ತಮುತ್ತಲಿನ ಗೂಡುಗಳಲ್ಲಿ ವಾಸಿಸುವ ಜನರ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ಅವರ ಬಳಿ ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್ ಹೊರತಾಗಿ ಬೇರೆ ದಾಖಲೆ ಇಲ್ಲ. ಸ್ವಂತ ಊರು ಯಾವುದೆಂದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಒಬ್ಬನನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ಬಿಜೆಪಿ ಮುಖಂಡ ಭರತ್ ತಿಳಿಸಿದರು.
ಅಗ್ರಹಾರ ಸತೀಶ್, ಗೋಪಾಲಪ್ಪ, ದಿನ್ನೂರು ರಾಜು, ನರಸಿಂಹರೆಡ್ಡಿ, ರಘುನಾಥರೆಡ್ಡಿ, ರಘು, ರಾಜೇಂದ್ರ ಇದ್ದರು.
ಬಿಜೆಪಿ ಮುಖಂಡರು ಕಾರ್ಯಕರ್ತರ ಜೊತೆ ಬೃಹತ್ ನಿರ್ಮಾಣ ಯಂತ್ರದೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಪ್ಲಾಸಿಕ್ಟ್ ಹಾಗೂ ಬಟ್ಟೆಯಿಂದ ಕಟ್ಟಿಕೊಂಡ ಕೆಲವು ಗೂಡುಗಳಂತಿದ್ದ ಕೆಲವು ಗುಡಿಸಲುಗಳನ್ನು ಕಿತ್ತು ಎಸೆದರು. ಇದರಿಂದಾಗಿ ಕೆಲವು ಕುಟುಂಬಗಳು ಬೀದಿಪಾಲಾದವು. ಮಹಿಳೆಯರು ಮಕ್ಕಳು ಗುಡಿಸಲಿನಲ್ಲಿದ್ದ ಹಾಸಿಗೆ ಅಡುಗೆ ಸಾಮಗ್ರಿಗಳನ್ನು ಪಕ್ಕದ ಖಾಲಿ ಜಾಗಕ್ಕೆ ಸಾಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.