ADVERTISEMENT

ಹೊಸಕೋಟೆ: ಕಸ.. ಕಸ.. ಎಲ್ಲಿ ನೋಡಿದರೂ ಕಸ

ದಶಕದಿಂದಿಲ್ಲ ಸಮರ್ಪಕ ಕಸ ವಿಲೇವಾರಿ । ರಸ್ತೆ ಬದಿಯಲ್ಲೇ ಕಸ ಸುರಿಯುವ ಜನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:26 IST
Last Updated 19 ಆಗಸ್ಟ್ 2025, 2:26 IST
ಹೊಸಕೋಟೆಯ ದೊಡ್ಡ ಅಮಾನಿಕೆರೆಯ ಅಂಗಳದಲ್ಲಿ ಕಸ ಸುರಿದಿರುವುದು
ಹೊಸಕೋಟೆಯ ದೊಡ್ಡ ಅಮಾನಿಕೆರೆಯ ಅಂಗಳದಲ್ಲಿ ಕಸ ಸುರಿದಿರುವುದು   

ಹೊಸಕೋಟೆ: ನಗರದ ಪ್ರಮುಖ ವೃತ್ತ ಮತ್ತು ರಸ್ತೆ ಬದಿಯೇ ಕಸ ಸುರಿಯುವ ಜನ. ಕೆರೆ ಅಂಗಳದಲ್ಲೂ ತ್ಯಾಜ್ಯದ ರಾಶಿ. ಶಾಲೆ–ಕಾಲೇಜು ಆವರಣದಲ್ಲೂ ಕಸ. ಕಸ...ಕಸ... ಎಲ್ಲಿ ನೋಡಿದರೂ ಕಸ...

ಇದು ರಾಜ್ಯ ರಾಜಧಾನಿ ಮಗ್ಗುಲಲ್ಲೇ ಇರುವ ಹೊಸಕೋಟೆ ನಗರದ ದುಸ್ಥಿತಿ. ಅವೈಜ್ಞಾನಿಕ ಕಸ ವಿಲೇವಾರಿ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ನಿರ್ಲಕ್ಷ್ಯದಿಂದ ಇಡೀ ನಗರವೇ ಗಬ್ಬುದ್ದು ನಾರುತ್ತಿದೆ.

ಬೆಂಗಳೂರಿಗೆ ಸಮೀಪ ಇರುವ ಕಾರಣ ಹಾಗೂ ನಗರದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವುದರಿಂದ ಸಹಜವಾಗಿಯೇ ನಗರ ವಿಸ್ತರವಾಗಿ ಬೆಳೆಯುತ್ತಿದೆ. ನಗರದಲ್ಲಿ ಸದ್ಯ 82,000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಜನಸಂಖ್ಯೆ ಹಾಗೂ ನಗರ ಬೆಳವಣಿಗೆಗೆ ತಕ್ಕಂತೆ ಉತ್ಪಾದನೆಯಾಗುತ್ತಿರುವ ಕಸ ವಿಲೇವಾರಿಗೆ ನಗರಸಭೆ ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದ ನಗರದ ಬಹುತೇಕ ಭಾಗದಲ್ಲಿ ಕಸದ ರಾಶಿಗಳು ಕಾಣ್ಣಿಗೆ ರಾಚುತ್ತವೆ.

ADVERTISEMENT

ನಗರಸಭೆ ನಿರ್ಲಕ್ಷ್ಯದಿಂದ ನಗರದೊಳಗೆ ಹಾಗೂ ತಾಲ್ಲೂಕು ಪಂಚಾಯಿತಿ ನಿರ್ಲಕ್ಷ್ಯದಿಂದ ನಗರದ ಹೊರ ವಲಯದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಯೇ ಇದೆ. ಆದರೆ ವ್ಯಾಪ್ತಿಯ ಗಡಿಯ ತಿಕ್ಕಾಟ ಹಾಗೂ ಸಮನ್ವಯ ಕೊರತೆಯಿಂದ ಸ್ವಚ್ಛತೆ ಮರೆತಿವೆ ಎನ್ನುತ್ತಾರೆ ಪ್ರಜ್ಞಾವಂತರು.

ನಗರದಲ್ಲಿ ರಾತ್ರಿ ಅಥವಾ ಮುಂಜಾನೆ ಕೆಲಸಕ್ಕೆ ಹೋಗುವ ಜನರಿಗೆ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕಿಸಿ ಹಾಕಲು ತೊಟ್ಟಿಗಳು ಇಲ್ಲ.  ಕೆಲವರು ಮನೆ ಬಳಿ ಕಸ ಸಂಗ್ರಹ ವಾಹನ ಎರಡು ದಿನ ಬರುತ್ತದೆ. ಕೆಲವೆಡೆ ಬರುತ್ತದೆ, ಕೆಲವು ಬಡಾವಣೆಗೆ ವಾಹನ ಬರುವುದೇ ಇಲ್ಲ. ಹೀಗಾಗಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ರೂಢಿಸಿಕೊಂಡಿದ್ದಾರೆ.

ಆದರೆ ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಜಾಣ ನಡೆ ಪ್ರದರ್ಶಿಸುತ್ತಿದೆ. ತಾಲೂಕು ಪಂಚಾಯಿತಿ ಮತ್ತು ನಗರಸಭೆ ಜಂಟಿಯಾಗಿ ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬುದು ಪ್ರಜ್ಞಾವಂತ ನಾಗರಿಕರ ಅಭಿಲಾಷೆ.

13 ಕಿ. ಮೀ. ಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಹೊಸಕೋಟೆ ನಗರಕ್ಕೆ ಹೆಸರಿಗೆ ಮಾತ್ರ ಅಮಾನಿಕೆರೆ ಬಳಿ ಒಂದು ಕಸ ವಿಲೇವಾರಿ ಘಟಕ ಇದೆ. ಆದರೆ ಅಲ್ಲಿ ಯಾವ ಕೆಲಸವು ಆಗುತ್ತಿಲ್ಲ. 

ನಗರದಲ್ಲಿ ಎಲ್ಲಿ ನೋಡಿದರೂ ಕಸ, ದುರ್ವಾಸನೆ, ಮಲೀನಗೊಂಡ ಪರಿಸರ ಕಾಣುತ್ತಿದೆ. ಇದನ್ನು ಸರಿಪಡಿಸಿ ಸ್ವಚ್ಛ ಹೊಸಕೋಟೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹೊಸಕೋಟೆಯ ಚಿಂತಾಮಣಿ ರಸ್ತೆಯ ಬಳಿ ಕಸ ಸುರಿದಿರುವುದು
ಹೊಸಕೋಟೆಯ 23 ವಾರ್ಡ್ ಬಳಿ ಕಸ ಸುರಿದಿರುವುದು
ಹೊಸಕೋಟೆಯ ಸಾಯಿ ಬಡಾವಣೆ ಬಳಿ ಕಸ ಸುರಿದಿರುವುದು
ಹೊಸಕೋಟೆಯ ಬಾಲಾಜಿ ಲೇಔಟ್ ಪ್ರವೇಶ ಭಾಗದಲ್ಲಿ ಕಸ ಸುರಿದಿರುವುದು
ಹೊಸಕೋಟೆಯ ಮಾಲೂರು ರಸ್ತೆಯ ಬಳಿ ಕಸ ಸುರಿದಿರುವುದು

ನಾವು ನಿಮ್ಮಂತೆ ಮನುಷ್ಯರೇ

ನಗರ ಸ್ವಚ್ಛಗೊಳಿಸುವ ಜವಾಬ್ದಾರಿ ಕೇವಲ ನಮಗೆ ಸೀಮಿತವಲ್ಲ. ನಮಗೆಷ್ಟು ಸ್ವಚ್ಛಗೊಳಿಸುವ ಹೊಣೆ ಇರುತ್ತದೋ ಅಷ್ಟೇ ಹೊಣೆ ನಾಗರಿಕರಿಗೂ ಇರುತ್ತದೆ. ಆದರೆ ಸಾರ್ವಜನಿಕರು ರಸ್ತೆ ಬದಿ ಶಾಲಾ–ಕಾಲೇಜುಗಳ ಬದಿ ಬಡಾವಣೆಗಳ ಪ್ರವೇಶ ದ್ವಾ ಕೆರೆಯ ಅಂಗಳ ಮತ್ತು ದಂಡೆಯಲ್ಲಿ ಕಸ ಸುರಿದು ಗಬ್ಬುನಾರುವಂತೆ ಮಾಡಿದ್ದಾರೆ. ಇದಕ್ಕೆ ಯಾರು ಹೊಣೆ?. ಇಂತಹ ಗಬ್ಬು ನಾರುವ ಕಸವನ್ನು ನಾವು ಹೇಗೆ ಎತ್ತುವುದು? ‘ನಾವು ನಿಮ್ಮಂತೆ ಮನುಷ್ಯರು’ ಎಂದು ಬೇಸರದಿಂದ ನುಡಿಯುತ್ತಾರೆ ಪೌರಕಾರ್ಮಿಕರು.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ಇಲ್ಲವೇ ಮುಂಜಾನೆ ಕಂಪನಿ ಮತ್ತು ಮತ್ತಿತರ ಕೆಲಸಗಳಿಗೆ ಹೋಗುವ ಜನ ಕಸ ಸುರಿಯುತ್ತಿದ್ದಾರೆ. ನಗರಸಭೆ ಇದನ್ನು ತಡೆಯಲು ಬೀಟ್ ಸಹ ಮಾಡಿದೆ. ಆದರೂ ರಸ್ತೆ ಬದಿ ಕಸ ಸುರಿಯುವುದನ್ನು ಸಂಪೂರ್ಣವಾಗಿ ತಡೆಯಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಸರ್ಕಾರೇತರ ಸಂಸ್ಥೆಗಳೊಂದಿಗೆ ಜನರಿಗ ವೈಜ್ಞಾನಿಕ ಕಸ ವಿಲೇವಾರಿ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ನಗರಸಭೆ ಆಯುಕ್ತ ನೀಲಲೋಚನ ಪ್ರಭು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.