ಹೊಸಕೋಟೆ: ಹಂದಿಗೂಡಿನಂತಿರುವ ಶೆಡ್, ಗುಡಿಸಲಲ್ಲಿ 10–12 ಮಂದಿಯ ವಾಸ. ಸ್ನಾನ, ಶೌಚಕ್ಕೆ ಬಯಲ್ಲೇ ಗತಿ. ಶಿಥಿಲಗೊಂಡ ಮನೆಗಳು. ಯಾವಾಗ ಕುಸಿದು ಬೀಳುತ್ತದೆಯೋ ಎಂಬ ಜೀವ ಭಯದಲ್ಲೇ ಜೀವನ ಸಾಗಿಸುವ ಜನ...
ಈ ಎಲ್ಲವು ಯಾವುದೋ ಕುಗ್ರಾಮದ ಚಿತ್ರಣವಲ್ಲ; ಬದಲಿಗೆ ರಾಜ್ಯ ರಾಜಧಾನಿ ಸಮೀಪ ಇರುವ ಹೊಸಕೋಟೆ ನಗರದ ದಲಿತ ಕೇರಿಯದ್ದು.
ಗೌತಮ್ ಕಾಲೊನಿಯಲ್ಲಿ 25ಕ್ಕೂ ಹೆಚ್ಚು ಮನೆಗಳು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿವೆ. ಮಳೆ–ಗಾಳಿ ಬಂದರೆ ಈ ಮನೆಗಳಲ್ಲಿ ವಾಸ ಮಾಡಲು ಆಗದೆ ಇಲ್ಲಿನ ನಿವಾಸಿಗಳು ಪರಿತಪಿಸುತ್ತಿದ್ದಾರೆ.
ಎರಡೂ ಮೂರು ತಲೆಮಾರುಗಳಿಂದ ಇಲ್ಲೇ ಜೀವನ ಕಟ್ಟಿಕೊಂಡಿದ್ದಾರೆ. ಕೂಲಿ ಮಾಡಿಕೊಂಡು ಬದುಕಿನ ಬಂಡಿ ದೂಡುತ್ತಿರುವ ಇಲ್ಲಿನ ಜನಕ್ಕೆ ಸ್ವಂತ ಮನೆ ಕಟ್ಟಿಕೊಳ್ಳಲು ಶಕ್ತಿ ಇಲ್ಲದೆ ಸ್ವಂತ ಸೂರು ಎಂಬುದು ಕನ್ನಡಿಯೊಳಗಿನ ಗಂಟಾಗಿದೆ. ಇನ್ನೂ ಹಲವು ವರ್ಷಗಳಿಂದ ವಾಸುತ್ತಿರುವವರಿಗೆ ಸ್ಥಳೀಯ ಆಡಳಿತ ಹಕ್ಕುಪತ್ರವನ್ನೂ ನೀಡಿಲ್ಲ. ಎರಡು ಮೂರು ತಲೆಮಾರುಗಳಿಂದ ಇಲ್ಲೇ ವಾಸಿಸುತ್ತಿದ್ದರೂ, ಈ ನೆಲ ನಮ್ಮದು ಎಂಬ ಭಾವವೇ ಇಲ್ಲದೆ ಬದುಕು ನಡೆಸುತ್ತಿದ್ದಾರೆ.
ಪ್ರಾಣ ಭಯದಿಂದ ಬದುಕುತ್ತಿದ್ದೇವೆ: ‘ನಮ್ಮ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮೇಲಿನ ಹೆಂಚು ಅಥವಾ ಸಿಮೆಂಟ್ ಶೀಟ್ ಒಡೆದು ಹೋಗಿದ್ದು, ಟಾರ್ಪಲ್ ಹಾಕಿ ಅದರ ಮೇಲೆ ಕಲ್ಲು ಜೋಡಿಸಿಕೊಂಡಿದ್ದೇವೆ. ಜೋರಾಗಿ ಗಾಳಿ ಬಂದರೆ ಅದು ಯಾವಾಗ ಹಾರಿಹೋಗುತ್ತೊ ಗೊತ್ತಿಲ್ಲ. ನಾಲ್ಕು ಜನ ಮಲಗುವ ಜಾಗದಲ್ಲಿ 10 ರಿಂದ 11 ಜನ ವಾಸ ಮಾಡುತ್ತಿದ್ದೇವೆ ಎಂದರೆ ನಾವು ಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದು ಊಹಿಸಿಕೊಳ್ಳಿ’ ಎಂದು ನಿವಾಸಿ ಚಂದ್ರಮ್ಮ ಅಸಮಾಧಾನಿತ ಧ್ವನಿಯಲ್ಲಿ ದುಃಖ ತೋಡಿಕೊಂಡರು.
ನಮ್ಮ ಮನೆಗಳು ಬಿದ್ದರೆ ಏನಾಗುತ್ತೆ ನಾವು ಸತ್ತರೆ ಏನಾಗಬೇಕು? ಎಂಬ ದೋರಣೆ ಅಧಿಕಾರಿಗಳು ಮತ್ತು ರಾಜಕಾರಣಿಗಳಲ್ಲಿದ್ದಂತಿದೆ
ಚಿಕ್ಕ ಭಯ್ಯಪ್ಪ ಗೌತಮ್ ಕಾಲೊನಿ ನಿವಾಸಿ
ಚುನಾವಣೆ ಬಂದಾಗ ಮಾತ್ರ ನಾವು ರಾಜಕಾರಣಿಗಳಿಗೆ ನೆನಪು ಆಗುತ್ತೇವೆ. ಇಲ್ಲವೇ ಮನೆ ಬಿದ್ದು ನಾವು ಸತ್ತರೆ ಅಥವಾ ನಮ್ಮ ಮನೆಗಳಿಗೆ ಮಳೆ ನೀರು ನುಗ್ಗಿದಾಗ ಅನುಕಂಪದ ಹೆಸರಲ್ಲಿ ಫೋಟೋಗೆ ಪೋಸ್ ಕೊಡಲು ನಾವುಗಳು ಅವರಿಗೆ ಬೇಕು
ಬಾಲಕೃಷ್ಣ ಗೌತಮ್ ಕಾಲೋನಿ ನಿವಾಸಿ
ನಮ್ಮದು ಅಂತ ಪಿತ್ರಾರ್ಜಿತ ಮನೆ ಇರೋದು ಇದೊಂದೆ. ಅದು ನಾಲ್ಕು ವರ್ಷಗಳ ಹಿಂದೆಯೇ ಬೀಳುವ ಹಂತಕ್ಕೆ ತಲುಪಿತ್ತು. ಮಕ್ಕಳಿರುವ ಕಾರಣ ಖಾಲಿ ಮಾಡಿ ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ.
ಗಂಗಾಧರಯ್ಯ ಸ್ಥಳೀಯ
ಸಮಸ್ಯೆಗಳು ಒಂದಲ್ಲ..
ಎರಡಲ್ಲ; ಹೇಳತೀರದು.. ಬಯಲು ಶೌಚ ಅಡುಗೆ ಮನೆಯಲ್ಲಿ ಸ್ನಾನ: ಶೌಚಕ್ಕಾಗಿ ಕೆಲವು ಮನೆಗಳಿಗೆ ಸಣ್ಣದೊಂದು ಬೀಳುವ ಹಂತದ ಕೋಣೆ ಇದ್ದರೆ ಉಳಿದ ಮನೆಗಳಿಗೆ ಮುಂಜಾನೆ ಇಲ್ಲೆವೇ ರಾತ್ರಿ ಬಯಲಿಗೆ ಹೋಗಬೇಕು. ಸ್ನಾನ ಮಾಡಲು ಮಾತ್ರ ಅಡಿಗೆ ಮನೆಯಲ್ಲಿ ಒಂದಿಷ್ಟು ಜಾಗ ಮಾಡಿಕೊಂಡಿದ್ದಾರೆ. ಮನೆ ಮುಂದೆಯೇ ಹರಿವ ಚರಂಡಿ: ಮನೆ ಬಾಗಿಲಿಗೆ ಹೊಂದಿಕೊಂಡು ಚರಂಡಿ ನಿರ್ಮಿಸಲಾಗಿದ್ದು ಚರಂಡಿ ಮುಚ್ಚಿಲ್ಲ. ಇದರಿಂದ ನಿತ್ಯ ದುರ್ನಾತ ಸಹಿಸಿಕೊಂಡು ಊಟ–ನಿದ್ದೆ ಮಾಡಬೇಕು. ಇನ್ನೂ ಮುದುಕರು ಮಕ್ಕಳು ಚರಂಡಿ ದಾಡಲು ಕಷ್ಟ ಪಡುತ್ತಿದ್ದಾರೆ. ಮನೆಗೆ ನುಗ್ಗುವ ಮಳೆ ನೀರು: ಗೌತಮ್ ಕಾಲೊನಿ ತಗ್ಗು ಪ್ರದೇಶದಲ್ಲಿ ಇರುವ ಕಾರಣ ಮಳೆಗಾಲದಲ್ಲಿ ಮಳೆಯ ನೀರು ಮನೆ ಒಳಗೆ ನುಗ್ಗುತ್ತದೆ. ಮನೆಗಾಲದಲ್ಲಿ ನಮ್ಮ ಸಮಸ್ಯೆ ಒಂದೊಂದಲ್ಲ. ಕೊಳಚೆ ಸಹಿತ ಮಳೆ ನೀರು ಹೊರ ಹಾಕುವುದು ಒಂದೆಡೆ ಅದರೊಂದಿಗೆ ಬರುವ ಹುಳು ಹುಪ್ಪಟ್ಟೆಯಿಂದ ರಕ್ಷಿಸಿಕೊಳ್ಳಲು ದೊಡ್ಡ ಸಾಹಸವೇ ಮಾಡಬೇಕು. ರಸ್ತೆ ಇಲ್ಲ: ಮುಖ್ಯ ರಸ್ತೆಯಿಂದ ಮಾರಮ್ಮ ದೇವಸ್ಥಾನದ ವರೆಗೂ ಮಾತ್ರ ಸಿಸಿ ರಸ್ತೆ ಇದೆ. ಉಳಿದಂತೆ ಎಲ್ಲಿಯೂ ರಸ್ತೆಯೇ ಇಲ್ಲ. ಎಲ್ಲಿಂದರಲ್ಲಿ ಕಾಣುವ ಕಸ ರಾಶಿ ಮನೆಗಳನ್ನು ಸಂಪರ್ಕಿಸುವ ಚರಂಡಿಗಳಿಲ್ಲದೆ ಮನೆ ಮುಂದೆಯೇ ಹರಿಯುವ ಕೊಳಚೆ... ಒಟ್ಟರೇ ಇಡೀ ಏರಿಯಾದಲ್ಲಿ ಸ್ವಚ್ಛತೆಯೇ ಇಲ್ಲದೆ ಗಲೀಜು ತಾಂಡವವಾಡುತ್ತಿದೆ. ನಗರಸಭೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಬಿಟ್ಟರೇ ಇಲ್ಲಿ ಯಾವ ಸೌಲಭ್ಯವು ಇಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
‘ಹಕ್ಕುಪತ್ರ ಕೊಟ್ಟರೆ; ಮನೆ ಕಟ್ಟಿಸಿಕೊಡುತ್ತೇವೆ’
ಗೌತಮ್ ಕಾಲೊನಿ ಇರುವ ಜಾಗ ರೆವಿನ್ಯೂ ಸರ್ವೇ ನಂಬರ್ ವ್ಯಾಪ್ತಿಗೆ ಬರುತ್ತದೆ. ಅದರ ಮಾಲೀಕರು ಯಾರು ಎಂಬುದೇ ಗೊತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿದ್ದೇವೆ. ತಹಶೀಲ್ದಾರ್ ಸ್ಥಳೀಯರಿಗೆ ಹಕ್ಕುಪತ್ರ ಕೊಡಿಸಿದರೆ ಖಂಡಿತವಾಗಿಯೂ ನಗರಸಭೆಯಿಂದ ಮನೆ ಕಟ್ಟಿಸಿಕೊಡುತ್ತೇವೆ ಎಂದು ನಗರಸಭೆ ಆಯುಕ್ತ ನೀಲಲೋಚನ ಪ್ರಭು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.