ADVERTISEMENT

ಎಸ್‌ಟಿಗೆ ಬೆಸ್ತರು | ಹೋರಾಟಕ್ಕೆ ತಜ್ಞರ ಸಮಿತಿ: ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:42 IST
Last Updated 6 ಅಕ್ಟೋಬರ್ 2025, 6:42 IST
ಹೊಸಕೋಟೆ ನಗರದ ಬೆಸ್ತರಪೇಟೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು
ಹೊಸಕೋಟೆ ನಗರದ ಬೆಸ್ತರಪೇಟೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು   

ಹೊಸಕೋಟೆ: ಬೆಸ್ತರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ದಶಕಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಕಾರಣ ತಜ್ಞರ ಸಮಿತಿ ರಚಿಸಿದ್ದೇವೆ ಎಂದು ಹಾವೇರಿ ಜಿಲ್ಲೆಯ ನರಸೀಪುರದ ನಿಜಗುಣ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ನಗರದ ಬೆಸ್ತರಪೇಟೆಯಲ್ಲಿ ಭಾನುವಾರ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ದೇಶಕ್ಕೆ ಎರಡು ಮಹಾಕಾವ್ಯ ಕೊಟ್ಟಿರುವ ತಳ ಸಮುದಾಯಗಳು ಇಂದಿಗೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ದುರಂತ ಎಂದರು.

ಕರ್ನಾಟಕದಲ್ಲಿ 35 ರಿಂದ 40 ಲಕ್ಷದಷ್ಟು ಬೆಸ್ತರ ಜನಸಂಖ್ಯೆ ಇದ್ದು, ಜನಸಂಖ್ಯೆಗೆ ಅನುಗುಣವಾಗಿ ಅವಕಾಶಗಳು ಮಾತ್ರ ಶೂನ್ಯ ಎಂದರು.

ADVERTISEMENT

ಬೆಸ್ತರನ್ನು ಎಸ್‌.ಟಿ ಪಟ್ಟಿಗೆ ಸೇರಿಸುವಂತೆ ದಶಕಗಳಿಂದ ಕೇಳುತ್ತಿದ್ದೇವ. ಆದರೆ ಕೇಂದ್ರ ಸರ್ಕಾರ ಪ್ರತಿ ಸಲವೂ ತಿರಸ್ಕರಿಸುತ್ತಿದೆ. ಸಮೀಕ್ಷೆ ಪ್ರಕಾರ ಶೇ. 53 ಕ್ಷೇತ್ರಗಳಲ್ಲಿ ಬೆಸ್ತರು ಜನಪ್ರತಿನಿಧಿಗಳ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಆದರೆ ಸಮುದಾಯವನ್ನು ಪ್ರತಿನಿಧಿಸುವ ಸಮುದಾಯದ ಒಬ್ಬ ಶಾಸಕನೂ ವಿಧಾನಸಭೆಯಲ್ಲಿ ಇಲ್ಲ ಎಂದು ಕೋಲಿ ಗಂಗಮತಸ್ಥ ರಾಜ್ಯ ಒಕ್ಕೂಟದ ಅಧ್ಯಕ್ಷ ಮೋಹನ್ ಬೇಸರ ವ್ಯಕ್ತಪಡಿಸಿದರು.

ಅಂಬಿಗರ ಸಮುದಾಯ ಭವನಕ್ಕೆ ಸ್ಥಳ ಮಂಜೂರು ಮಾಡಬೇಕು ಎಂಬ ಸಮುದಾಯದ ಮುಖಂಡರು ಮನವಿಗೆ ಸ್ಪಂದಿಸಿದ ಶಾಸಕ ಶರತ್ ಬಚ್ಚೇಗೌಡ ಅವರು ನಗರದಲ್ಲಿ ಇಲ್ಲವೇ ಕಸಬಾ ಹೋಬಳಿಯಲ್ಲಿ ಸ್ಥಳ ಗುರುರಿಸಿ ಸಮುದಾಯ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ  ರವಿಕುಮಾರ್, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ರೇಷ್ಮೆ ಮಂಡಳಿ ಅಧ್ಯಕ್ಷ ಗಂಗಾಧರ್, ಕೇಶವಮೂರ್ತಿ, ಧರ್ಮಪ್ಪ, ಶಿವಣ್ಣ, ಪಾಷಾ, ರಾಜಣ್ಣ, ವೈ.ಎಸ್. ಮಂಜು, ಸುಬ್ಬರಾಜು, ಸುಭಾಷ್, ಜಯರಾಜ್ ಡಿವೈಎಸ್‌ಪಿ ಮಲ್ಲೇಶ್ ವೇದಿಕೆಯಲ್ಲಿದ್ದರು.

ಅಂಬಿಗ ಚೌಡಯ್ಯನಂತೆ ನಿಷ್ಠುರವಾದಿಗಳಾಗಿ 

ಅಂಬಿಗರ ಚೌಡಯ್ಯನ ವಚನಗಳು ಪ್ರತಿಯೊಬ್ಬ ಬೆಸ್ತನ ನಾಲಿಗೆಯಲ್ಲೂ ಗಾಯಿತ್ರಿ ಮಂತ್ರದಂತೆ ಪಠಿಸಲ್ಪಡಬೇಕು. ಆಗ ಮಾತ್ರ ಅಂಬಿಗರ ಚೌಡಯ್ಯನ ರೀತಿಯಲ್ಲಿ ನಿಷ್ಠರತೆಯಿಂದ ನಡೆದುಕೊಳ್ಳಲು ಸಾಧ್ಯ. ಸತ್ಯವನ್ನು ಯಾವ ಹಮ್ಮು ಬಿಮ್ಮು ಇಲ್ಲದೆ ಹೇಳಲು ಸಾಧ್ಯವಾಗುತ್ತದೆ ಎಂದು ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು. ಅಂಬಿಗರ ಚೌಡಯ್ಯ ವಚನಗಳಲ್ಲಿ ಸಮಾಜದಲ್ಲಿನ ಅಂಕುಡೊಂಕಿನ ಅಸಮಾನತೆಯನ್ನು ನಿಷ್ಠುರತೆಯಿಂದ ವಿಡಂಬಿಸಲಾಗಿದೆ. ಅಂಬಿಗನ ದೋಣಿಯಲ್ಲಿ ಎಲ್ಲಾ ಜಾತಿಯವರು ಕುಳಿತುಕೊಳ್ಳಬಹುದಿತ್ತು. ಆತ ಕಾಯಕವೇ ಪೂಜೆಯಾಗಬೇಕು ಪೂಜೆಯೇ ಕಾಯಕವಾಗಬಾರದು ಎಂದು ಕಾಯಕ ವೃತ್ತಿಯನ್ನು ನಂಬಿದ್ದರು ಎಂದು ಹೇಳಿದರು. ನೂರಾರು ದೇವತೆಗಳನ್ನು ಪೂಜಿಸಬೇಡಿ ಎಂದು ಹೇಳುವುದಿಲ್ಲ. ಯಾವುದೇ ಮೂರ್ತಿಗಳನ್ನು ಜಾತಿಯ ಹಿನ್ನೆಲೆಯಲ್ಲಿ ನೋಡಬಾರದು. ಅವುಗಳನ್ನು ಜಾತ್ಯತೀತತೆಯಿಂದ ನೋಡಬೇಕು. ಅವರ ಆದರ್ಶ ಗೌರವಿಸಿ ಸ್ವೀಕರಿಸಬೇಕಿದೆ ಎಂದರು.ಪ್ರಜಾಪ್ರಭುತ್ವದ ನಿಜವಾದ ಧ್ವನಿಯೇ ಅಲಕ್ಷಿತ ಸಮುದಾಯಗಳು ರಾಜಕಾರಣದಲ್ಲಿ ಗುರುತಿಸಿಕೊಳ್ಳುವುದು. ಹಾಗೆಯೇ ವಿದ್ಯದ ಜೊತೆ ಕೌಶಲ ಬೆಳೆಸಿಕೊಂಡು ವ್ಯಕ್ತಿತ್ವ ವಿಕಸನಕ್ಕೆ ಹಾದಿ ಸುಗಮಗೊಳಿಸಿಕೊಳ್ಳುವುದು ಶರತ್ ಬಚೇಗೌಡ ಶಾಸಕ

ಹೊಸಕೋಟೆ ತಾಲ್ಲೂಕಿನಲ್ಲಿ ಸುಮಾರು 6 ರಿಂದ 7 ಸಾವಿರ ಬೆಸ್ತ ಮತದಾರರಿದ್ದು ಇಂದಿಗೂ ಸಾಮಾಜಿಕ ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ. ಇಂತಹ ಸಣ್ಣ ಸಮುದಾಯವನ್ನು ಸರ್ಕಾರ ಕೈಹಿಡಿದು ಮುಂದೆ ನಡೆಸಬೇಕಿದೆ.
–ಮೋಹನ್, ಅಧ್ಯಕ್ಷ ಕೋಲಿ ಗಂಗಮತಸ್ಥ ರಾಜ್ಯ ಒಕ್ಕೂಟ
ಪ್ರಜಾಪ್ರಭುತ್ವದ ನಿಜವಾದ ಧ್ವನಿಯೇ ಅಲಕ್ಷಿತ ಸಮುದಾಯಗಳು ರಾಜಕಾರಣದಲ್ಲಿ ಗುರುತಿಸಿಕೊಳ್ಳುವುದು. ಹಾಗೆಯೇ ವಿದ್ಯದ ಜೊತೆ ಕೌಶಲ ಬೆಳೆಸಿಕೊಂಡು ವ್ಯಕ್ತಿತ್ವ ವಿಕಸನಕ್ಕೆ ಹಾದಿ ಸುಗಮಗೊಳಿಸಿಕೊಳ್ಳುವುದು
–ಶರತ್ ಬಚೇಗೌಡ, ಶಾಸಕ
ಬ್ರಾಹ್ಮಣ ಸಮುದಾಯ ಇನ್ನು ಮನುವಾದಿತನ ಪ್ರದರ್ಶಸುತ್ತಿರುವ ಕಾರಣ ರಾಜಕೀಯವಾಗಿ ನಮ್ಮ ಸಮುದಾಯ ಸಂಘಟಿತರಾಗಬೇಕಿದೆ
–ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ನಿಜಗುಣ ಅಂಬಿಗರ ಚೌಡಯ್ಯನವರ ಗುರುಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.