ADVERTISEMENT

ಭರತನಾಟ್ಯ ಸಂಸ್ಕೃತಿಯ ಪ್ರತೀಕ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 4:46 IST
Last Updated 24 ಜುಲೈ 2022, 4:46 IST
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಶಿವಾಲಯ ನಾಟ್ಯ ಮಂದಿರದಿಂದ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಭರತನಾಟ್ಯ ಪ್ರದರ್ಶನವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಪ.ರಾ. ಕೃಷ್ಣಮೂರ್ತಿ ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಶಿವಾಲಯ ನಾಟ್ಯ ಮಂದಿರದಿಂದ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಭರತನಾಟ್ಯ ಪ್ರದರ್ಶನವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಪ.ರಾ. ಕೃಷ್ಣಮೂರ್ತಿ ಉದ್ಘಾಟಿಸಿದರು   

ಆನೇಕಲ್:ತಾಲ್ಲೂಕಿನ ಚಂದಾಪುರ ಸಮೀಪದ ಸನ್‌ ಪ್ಯಾಲೇಸ್‌ ಕಲ್ಯಾಣ ಮಂಟಪದಲ್ಲಿ ಶಿವಾಲಯ ನಾಟ್ಯ ಮಂದಿರದಿಂದ ಗುರು ಪೂರ್ಣಿಮೆ ಅಂಗವಾಗಿ ಭರತನಾಟ್ಯ ಪ್ರದರ್ಶನ ಆಯೋಜಿಸಲಾಗಿತ್ತು. ನಾಟ್ಯ ಮಂದಿರದ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಪ.ರಾ. ಕೃಷ್ಣಮೂರ್ತಿ ಮಾತನಾಡಿ, ಭರತನಾಟ್ಯವು ಪುರಾತನನೃತ್ಯ ಕಲಾ ಪ್ರಕಾರವಾಗಿದೆ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ತಿಳಿಸಿದರು.

ಯುವ ಸಮುದಾಯ ಪ್ರಾಚೀನ ಕಲೆಗಳ ಬಗ್ಗೆ ಗೌರವ ಬೆಳೆಸಿಕೊಂಡು ಕಲಿಕೆಯತ್ತ ಆಸಕ್ತಿ ತೋರಬೇಕು. ಕಲೆಗಳು ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಹಾಗಾಗಿ, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದರು.

ADVERTISEMENT

ಕಲೆಯು ವ್ಯಕ್ತಿತ್ವ ನಿರ್ಮಾಣದಲ್ಲಿ ಬಹುದೊಡ್ಡ ಪಾತ್ರವಹಿಸುತ್ತದೆ. ಕಲೆಯಿಂದ ಜೀವನ ಕಟ್ಟಿಕೊಳ್ಳಬಹುದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯಕ್ಕೆ ಮಹತ್ವ ನೀಡಬೇಕು. ಯುವ ಸಮುದಾಯ ಸಾಧನೆಯತ್ತ ಪಣ ತೊಡಬೇಕು. ಈ ಮೂಲಕ ಬಲಿಷ್ಠ ಭಾರತವನ್ನು ನಿರ್ಮಿಸಬೇಕು ಎಂದರು.

ಭಾರತ್‌ ರಕ್ಷ ಪ್ರತಿಷ್ಠಾನದ ಅಧ್ಯಕ್ಷ ಮೇಜರ್‌ ಎನ್‌. ರಘುರಾಮರೆಡ್ಡಿ ಮಾತನಾಡಿ, ಒಂದು ದೇಶದ ಸಂಸ್ಕೃತಿಯು ಕಲೆಗಳಿಂದ ಅಭಿವ್ಯಕ್ತಗೊಳ್ಳುತ್ತದೆ. ಮಾತಿನಿಂದ ಹೇಳಲಾಗದ್ದನ್ನು ಕಲೆಯ ಮೂಲಕ ಸ್ಪಷ್ಟವಾಗಿ ಹೇಳಬಹುದಾಗಿದೆ. ಹಾಗಾಗಿ, ಕಲೆಯನ್ನು ಪ್ರತಿಯೊಬ್ಬರು ಆರಾಧಿಸಬೇಕು. ಭರತ ನಾಟ್ಯದಂತಹ ಕಲೆಗಳು ಸಮಾಜದ ಜೀವಂತಿಕೆಗೆ ಸಾಕ್ಷಿಯಾಗಿವೆ ಎಂದರು.

ಶಿವಾಲಯ ನಾಟ್ಯ ಮಂದಿರದ ವಿದ್ಯಾರ್ಥಿಗಳು ಭರತನಾಟ್ಯದ ವಿವಿಧ ಪ್ರಕಾರಗಳನ್ನು ಪ್ರದರ್ಶಿಸಿದರು. ಬೆಂಗಳೂರು ಲಯಾಭಿನಯ ಕಲ್ಚರಲ್‌ ಪ್ರತಿಷ್ಠಾನದ ಡಾ.ಜಯಶ್ರೀ ರವಿ, ಶಿವಾಲಯ ನಾಟ್ಯ ಮಂದಿರದ ಅಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ಆರ್. ಜಗದೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.